Saturday, March 5, 2016

ಬದಲಾವಣೆಗೆ ಸಮಯ ಬೇಕು’


ಬದಲಾವಣೆಗೆ ಸಮಯ ಬೇಕು’
BY ವಿಜಯವಾಣಿ ನ್ಯೂಸ್ · MAR 5, 2016

Oped Ankana 3
ಪ್ರಮುಖ ಸಾಫ್ಟ್​ವೇರ್ ಕಂಪನಿ ಇನ್ಪೋಸಿಸ್​ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲೊಬ್ಬರು ಟಿ.ವಿ.ಮೋಹನದಾಸ್ ಪೈ. ದೇಶದ ಖ್ಯಾತ ಕಾಪೋರೇಟ್ ಚಿಂತಕರಲ್ಲಿ ಓರ್ವರಾಗಿರುವ ಪೈ, ಸದ್ಯ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಹಾಗೂ ಉದ್ಯಮಗಳ ಹಲವಾರು ಸಲಹಾ ಸಮಿತಿಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ. ಸ್ಟಾರ್ಟಪ್​ಗಳಲ್ಲಿ ಬಂಡವಾಳ ಹೂಡಿಕೆ ಮೂಲಕ ಯುವ ಜನರ ಬೆನ್ನು ತಟ್ಟುತ್ತಿದ್ದಾರೆ. ಯುವಜನತೆಗೆ ಭವಿಷ್ಯದ ಕುರಿತಂತೆ ಚಿಂತನೆಗೆ ಹಚ್ಚುವ ‘ಪ್ರೇರಣಾ’ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಚೆಗೆ ಮಂಗಳೂರಿಗೆ ಬಂದಿದ್ದ ಪೈ, ಕೇಂದ್ರ ಸರ್ಕಾರದ ಕಾರ್ಯವೈಖರಿ, ಶಿಕ್ಷಣ, ಸ್ಮಾರ್ಟ್ ಸಿಟಿ ಮುಂತಾದ ವಿಷಯಗಳ ಬಗ್ಗೆ ‘ವಿಜಯವಾಣಿ’ಯೊಂದಿಗೆ ಅನಿಸಿಕೆಗಳನ್ನು ಹಂಚಿಕೊಂಡರು.

ಸುರೇಂದ್ರ ವಾಗ್ಳೆ
ಮೋದಿ ಸರ್ಕಾರದ ಬಗ್ಗೆ…

ಮೋದಿ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಪ್ರಧಾನಿ ಉದ್ಯೋಗ ಸೃಷ್ಟಿಯತ್ತ ಹೆಚ್ಚು ಗಮನ ನೀಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸಣ್ಣ ವಿಷಯವನ್ನೂ ದೊಡ್ಡದಾಗಿ ಮಾಡುತ್ತಿವೆ. ಅಸಹಿಷ್ಣುತೆ, ಜೆಎನ್​ಯುು ಮುಂತಾದ ಕ್ಷುಲ್ಲಕ ಕಾರಣ ಮುಂದಿಟ್ಟು ಗಲಾಟೆ ಮಾಡುತ್ತಿವೆ. ಈ ಸರ್ಕಾರ ಉತ್ತಮ ಕೆಲಸ ಮಾಡುತ್ತಹೋದರೆ ಮುಂದೆ ತಾವು ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಭಯ ಅವರಿಗೆ. ಅದಕ್ಕೆ ಈ ಎಲ್ಲ ಗಲಾಟೆ.

ವಿಶ್ವದ ಅರ್ಥಿಕತೆ ಉತ್ತಮ ಮಟ್ಟದಲ್ಲಿಲ್ಲ. ಚೀನಾ ಬೆಳವಣಿಗೆ ಕಡಿಮೆಯಾಗಿದೆ. ಯುರೋಪ್​ನಲ್ಲೂ ಅಭಿವೃದ್ಧಿ ಕಾಣುತ್ತಿಲ್ಲ. ಅಮೆರಿಕದ ಆರ್ಥಿಕತೆ ನಿಧಾನಗತಿಯಲ್ಲಿದೆ. ತೈಲ ಬೆಲೆ ಇಳಿದಿದೆ. ರಫ್ತು ಉದ್ಯಮದಲ್ಲೂ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿಯೂ ಕೇಂದ್ರ ಸರ್ಕಾರ ಉತ್ತಮ ಆರ್ಥಿಕ ಸುಧಾರಣೆ ನಿರ್ಣಯಗಳನ್ನು ಕೈಗೊಂಡಿದೆ. ಆದರೆ ಕಾರ್ಯದ ಫಲಿತಾಂಶ ಬರಲು ಒಂದಷ್ಟು ಸಮಯ ಬೇಕು. ಯಾಕೆಂದರೆ ಹೊರ ದೇಶಗಳ ವಾತಾವರಣ ತೀರಾ ಹದಗೆಟ್ಟಿದೆ. ಹೊಸ ಬಂಡವಾಳ ಹೂಡಿಕೆಯಾಗುತ್ತಿಲ್ಲ. ಬ್ಯಾಂಕ್​ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಲ ಪಡೆದವರು ವಾಪಸ್ ಮಾಡುತ್ತಿಲ್ಲ, ಬ್ಯಾಡ್ ಲೋನ್ ಪ್ರಮಾಣ ಜಾಸ್ತಿಯಾಗಿದೆ. ಬರದಿಂದಲೂ ಪರಿಸ್ಥಿತಿ ಹದಗೆಟ್ಟಿದೆ. ಬರುವ ಮಾನ್ಸೂನ್ ಉತ್ತಮವಾಗಲಿದೆ ಎನ್ನುವ ನಿರೀಕ್ಷೆ ಇದೆ. ಹಾಗಾಗಿ ಕೃಷಿ ಪರಿಸ್ಥಿತಿ ಸುಧಾರಿಸಿ ಬರಕ್ಕೆ ಬಳಸುವ ಹಣ ಅಭಿವೃದ್ಧಿಗೆ ವಿನಿಯೋಗಿಸಬಹುದಾಗಿದೆ. ಬರುವ ವರ್ಷ ಅಥವಾ ಮುಂದಿನ ಸೆಪ್ಟೆಂಬರ್ ಬಳಿಕ ಒಂದಷ್ಟು ಬದಲಾವಣೆಗಳು ಗೋಚರಿಸಲಿದೆ. ಅದು ಮುಂದಿನ ಮೂರ್ನಾಲ್ಕು ವರ್ಷ ನಂತರ ಮಹತ್ತರ ಬದಲಾವಣೆಗೆ ನಾಂದಿಯಾಗಲಿದೆ. ಆರ್ಥಿಕತೆ ವಿಚಾರದಲ್ಲಿ ಸರ್ಕಾರದ ಕ್ರಮಗಳ ಬಗ್ಗೆ ಪ್ರತಿಪಕ್ಷಗಳೂ ಆಕ್ಷೇಪ ತೆಗೆಯುತ್ತಿಲ್ಲ. ಇದನ್ನು ಬಿಟ್ಟು ಜೆಎನ್​ಯುು ಮುಂತಾದ ಕ್ಷುಲ್ಲಕ ವಿಷಯಗಳಲ್ಲಿ ಗೌಜಿ ಎಬ್ಬಿಸಲಾಗುತ್ತಿದೆ.

ಮೂಲಸೌಕರ್ಯದಲ್ಲಿ ತಂತ್ರಜ್ಞಾನ ಅಳವಡಿಕೆ

ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಾಹಿತಿ ತಂತ್ರಜ್ಞಾನ ಅಳವಡಿಕೆ ಕುರಿತಂತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ರಚಿಸಿರುವ ದ ಟೀಮ್ಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಇನ್ನು 15-20 ದಿನಗಳಲ್ಲಿ ವರದಿ ಸಲ್ಲಿಸಲಿದ್ದೇವೆ. ತಂತ್ರಜ್ಞಾನ ಬಳಸಿಕೊಂಡು ದೇಶದಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು. ರಸ್ತೆಗಳಿಗೆ ಮುಂದಿನ 5-10 ವರ್ಷಗಳಲ್ಲಿ 15 ಲಕ್ಷ ಕೋಟಿ ರೂ. ಖರ್ಚು ಮಾಡುತ್ತಿದ್ದರೆ ಅದನ್ನು ಹೇಗೆ ನಿರ್ವಹಣೆ ಮಾಡಬೇಕು? ಟೋಲ್ ಇಲೆಕ್ಟ್ರಾನಿಕ್ ಸಂಗ್ರಹಣೆಗೆ ಒತ್ತು ನೀಡಬೇಕು, ಅಪಘಾತ ಮುಕ್ತಗೊಳಿಸಬೇಕು ಮುಂತಾದ ಅಂಶಗಳನ್ನು ವರದಿಯಲ್ಲಿ ಸೂಚಿಸಲಿದ್ದೇವೆ. ಮೋದಿ ಸರ್ಕಾರದ ಉತ್ತಮ ಸಚಿವರಲ್ಲಿ ಗಡ್ಕರಿ ಒಬ್ಬರು. ಸುರೇಶ್ ಪ್ರಭು, ಪಿಯೂಷ್ ಗೋಯೆಲ್ ಅವರಂತಹ ಒಳ್ಳೆಯ ಸಚಿವರು ನಮಗೆ ಬೇಕು.

ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶ

ಕರಾವಳಿ ಪ್ರವಾಸೋದ್ಯಮ ಕುರಿತಂತೆ ನನ್ನ ಅಧ್ಯಕ್ಷತೆಯಲ್ಲಿ ಟೂರಿಸಂ ವಿಷನ್ ಗ್ರೂಪ್ ವರದಿ ಸಿದ್ಧಪಡಿಸಲಾಗಿದೆ. ಅದನ್ನು ಅನುಸರಿಸಿ ಈಗ ರಾಜ್ಯದ 300 ಕಿ.ಮೀ. ಉದ್ದ ಕರಾವಳಿ ಪ್ರದೇಶ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧಗೊಳ್ಳುತ್ತಿದೆ. ಜನರು ಮೊದಲು ಈ ನಿಟ್ಟಿನಲ್ಲಿ ಆಸಕ್ತಿ ತೋರಿಸಬೇಕು.

ಸಿಟಿಯನ್ನು ಸ್ಮಾರ್ಟ್ ಆಗಿಸುವ ಬಗೆ…

ಸ್ಮಾರ್ಟ್ ಸಿಟಿ ಅಂದರೇನೆಂದು ಮೊದಲು ನಮ್ಮ ನಾಯಕರಿಗೆ ತಿಳಿಯಬೇಕು. ಬರೀ ಅಷ್ಟು ಹಣ ಬಂತು, ಇಷ್ಟು ಖರ್ಚು ಮಾಡಿದೆ ಅಂದ್ರೆ ಅರ್ಥ ಇಲ್ಲ. ತಂತ್ರಜ್ಞಾನ ಬಳಸಿಕೊಂಡು ನಗರದಲ್ಲಿ ಸಂಚಾರ ದಟ್ಟಣೆಯನ್ನು ಹೇಗೆ ತಗ್ಗಿಸಬಹುದು? ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ಅಗತ್ಯವಾದ ಬಹುಮುಖಿ ಸಂಚಾರಿ ವ್ಯವಸ್ಥೆ ಹೇಗಿರಬೇಕು? ಮೆಟ್ರೋ ಬೇಕಾ, ಖಾಸಗಿ ಸಾರಿಗೆ ಬೇಕಾ? ಮಾಲಿನ್ಯ ತಡೆಗಟ್ಟುವ ರೀತಿ ಯಾವುದು? ಮುಂತಾದ ಸ್ಮಾರ್ಟ್ ನಿರ್ಧಾರಗಳನ್ನು ಕೈಗೊಳ್ಳುವ ಅಗತ್ಯವಿದೆ. ಸಾರ್ವಜನಿಕರಿಗೆ ಸಕಾಲದಲ್ಲಿ ಆರೋಗ್ಯ ಸವಲತ್ತುಗಳನ್ನು ನೀಡಲು ಆಂಬ್ಯುಲೆನ್ಸ್ ವ್ಯವಸ್ಥೆ ಸುಧಾರಿಸುವುದು, ಶುದ್ಧ ನೀರು ಸರಬರಾಜು ಮಾಡುವುದು ಇದೆಲ್ಲದರ ಡಾಟಾ ತಯಾರಿಸಬೇಕು. ಇದನ್ನೆಲ್ಲ ಮಾಡಿದರೆ ಜನರ ಉತ್ಪಾದಕತೆ ಹೆಚ್ಚಾಗುತ್ತದೆ, ಸಮಯ ಉಳಿಯುತ್ತದೆ. ಎಲ್ಲವನ್ನೂ ಸರಿಯಾಗಿ ಪ್ಲಾನ್ ಮಾಡಿ ಸರ್ಕಾರಕ್ಕೆ ಸಲ್ಲಿಸಿದರೆ ಖಂಡಿತವಾಗಿ ಒಪ್ಪಿಗೆ ಸಿಗುತ್ತದೆ.

ಕರ್ನಾಟಕದಲ್ಲಿ ಸ್ಮಾರ್ಟ್ ಸಿಟಿ ಕುರಿತಂತೆ ಪರಿಣತಿ ಇರುವವರು ಕಡಿಮೆ. ಬೆಂಗಳೂರಿನ ಆರ್.ಕೆ.ಮಿಶ್ರಾ ಅವರು ಟೋಕಿಯೋವನ್ನು ಸ್ಮಾರ್ಟ್ ಸಿಟಿಯಾಗಿ ರೂಪಿಸಿದ ತಂಡದಲ್ಲಿದ್ದ ವ್ಯಕ್ತಿ. ಅಂಥವರನ್ನು ಬಳಸಿಕೊಂಡು ಯೋಜನೆ ರೂಪಿಸಿದರೆ ಒಳ್ಳೆಯದು. ಜಗತ್ತಿನ ಬಹುತೇಕ ಎಲ್ಲ ಪ್ರಮುಖ ನಗರಗಳಿಗೂ ಅಭಿವೃದ್ಧಿ ಪ್ಲಾನ್ ಇರುತ್ತದೆ. ಸಿಂಗಾಪುರದ ನಿದರ್ಶನ ತೆಗೆದುಕೊಂಡರೆ, ಅಲ್ಲಿ 30 ವರ್ಷದ ಪ್ಲಾನ್ ಇದೆ. ಮುಂದಿನ 5, 10 ವರ್ಷಗಳಲ್ಲಿ ನಗರ ಎಷ್ಟು ಬೆಳೆಯಬಹುದು ಎನ್ನುವುದನ್ನು ಮೊದಲೇ ಅಂದಾಜು ಮಾಡುತ್ತಾರೆ, ಅದಕ್ಕೆ ಸರಿಯಾಗಿ ಬಂಡವಾಳ ಹೂಡುತ್ತಾರೆ. ನಮ್ಮಲ್ಲಿ ಅದನ್ನೆಲ್ಲ ಯೋಚಿಸುವ ಸಾಮರ್ಥ್ಯ ಬೇಕಲ್ಲ… ಇದರಲ್ಲಿ ಜನರ ಪಾಲ್ಗೊಳ್ಳುವಿಕೆಯೂ ಮುಖ್ಯ.

ಶಿಕ್ಷಣದಲ್ಲಿ ಜಾತಿ ಬೇಡ…

ಶಿಕ್ಷಣದಲ್ಲಿ ಜಾತಿಗಳನ್ನು ತಂದು ಮಕ್ಕಳನ್ನು ಹಾಳು ಮಾಡುತ್ತಿದ್ದಾರೆ. ಶಿಕ್ಷಣ ಗುಣಮಟ್ಟ ಹೆಚ್ಚಿಸಬೇಕಾದರೆ ಒಂದೇ ದಾರಿ, ಎಲ್ಲರೂ ಹಣ ಕೊಟ್ಟು ಪ್ರವೇಶ ಪಡೆಯಬೇಕು. ಬಡವರಿಗೆ ಸ್ಕಾಲರ್​ಷಿಪ್ ಕೊಡಲಿ. ಮುಂದೆ ಒಳ್ಳೆಯ ಮಾರ್ಕ್ಸ್ ಬಂದರೆ ಮಾತ್ರ

ಸ್ಕಾಲರ್​ಷಿಪ್ ಮುಂದುವರಿಸಬೇಕು. ಹಾಗೆ ಮಾಡಿದರೆ ಮಾತ್ರ ಮಕ್ಕಳು ಓದುತ್ತಾರೆ. ಅದನ್ನು ಬಿಟ್ಟು ‘ನಿನಗೆ ಎಲ್ಲವನ್ನೂ ಕೊಡುತ್ತೇವೆ. ಮೀಸಲಾತಿ ಕೊಡುತ್ತೇವೆ. ಉಚಿತ ಶಿಕ್ಷಣ ನೀಡುತ್ತೇವೆ’ ಅಂದ್ರೆ ಅದಕ್ಕೆ ಕೇಳುವವರಿಲ್ಲ-ಮಾಡುವವರಿಲ್ಲ ಎಂದಾಗುತ್ತದೆ. ಜೆಎನ್​ಯುುನ ಒಬ್ಬ ವಿದ್ಯಾರ್ಥಿ ಪದವಿ ಪಡೆಯಲು ಲಕ್ಷಾಂತರ ಹಣ ಖರ್ಚು ಮಾಡಲಾಗುತ್ತದೆ. ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಪ್ರಾಧ್ಯಾಪಕರು ಸರಿಯಾಗಿ ಪಾಠ ಮಾಡುವುದಿಲ್ಲ. ಬರೀ ಇಂತಹ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಅವರು ಖರ್ಚು ಮಾಡುವುದು ನಮ್ಮಂತಹವರ ತೆರಿಗೆ ಹಣ. ವ್ಯವಸ್ಥೆ ಕೆಡುವುದು ಇಲ್ಲೇ. ಇದನ್ನು ಬದಲಾಯಿಸಬೇಕಾದರೆ ಜನರು ಒಂದಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕು.
http://vijayavani.net/?p=1742291

No comments:

Post a Comment