Sunday, February 21, 2016

ರಾಷ್ಟ್ರಧ್ವಜ ಕಡ್ಡಾಯ: ಪ್ರತಿ ವಿಶ್ವವಿದ್ಯಾಲಯಕ್ಕೂ45 ಲಕ್ಷ ವೆಚ್ಚ

ರಾಷ್ಟ್ರಧ್ವಜ ಕಡ್ಡಾಯ: ಪ್ರತಿ ವಿಶ್ವವಿದ್ಯಾಲಯಕ್ಕೂ45 ಲಕ್ಷ ವೆಚ್ಚ
ಹೊಸದಿಲ್ಲಿ: ರಾಷ್ಟ್ರೀಯತೆ ಬೆಲೆ ಕಟ್ಟಲಾಗದ ಸ್ವತ್ತು ನಿಜ. ಆದರೆ ಎಲ್ಲ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಯೋಜನೆ ಮಾತ್ರ ಬಹಳ ವೆಚ್ಚವನ್ನು ಬೇಡುತ್ತಿದೆ.

ರಾಷ್ಟ್ರಧ್ವಜ ಹಾರಿಸಲು ನಿರ್ಮಿಸಲು ಉದ್ದೇಶಿಸಲಾಗಿರುವ 200 ಅಡಿ ಅಥವಾ ಅದಕ್ಕಿಂತ ಎತ್ತರದ ಸ್ತಂಭವನ್ನು ಸಿದ್ಧಪಡಿಸಲು ಪ್ರತಿ ವಿಶ್ವವಿದ್ಯಾಲಯಕ್ಕೂ 40-45 ಲಕ್ಷ ರೂ. ವೆಚ್ಚವಾಗಲಿದೆ. ಅಲ್ಲದೆ ಈ ಧ್ವಜದ ನಿರ್ವಹಣೆಗೆ ತಿಂಗಳಿಗೆ 65 ಸಾವಿರ ರೂ.ಗೂ ಅಧಿಕ ಖರ್ಚು ಬರಲಿದೆ ಎಂದು ಫ್ಲ್ಯಾಗ್‌ ಫೌಂಡೇಶನ್‌ ಆಫ್‌ ಇಂಡಿಯಾದ ಸಿಇಒ, ನಿವೃತ್ತ ಕಮಾಂಡರ್‌ ಕೆ.ವಿ. ಸಿಂಗ್‌ ಎಕಾನಮಿಕ್‌ ಟೈಮ್ಸ್‌ಗೆ ತಿಳಿಸಿದ್ದಾರೆ.

ನಾವು 200 ಅಡಿಗೂ ಎತ್ತರದ ಧ್ವಜಗಳು ಸೇರಿದಂತೆ 65ಕ್ಕೂ ಅಧಿಕ ರಾಷ್ಟ್ರೀಯ ಧ್ವಜ ಸ್ತಂಭಗಳನ್ನು ನಿರ್ಮಿಸಿಸಿದ್ಧೇವೆ. ಪುಣೆಯ ಎರಡು ಕಾರ್ಖಾನೆಗಳಲ್ಲಿ ನಿರ್ಮಾಣವಾಗುವ ವಿಶೇಷವಾದ ಉಕ್ಕಿನಿಂದ ಮಾಡಿದ ಧ್ವಜಸ್ತಂಭಗಳನ್ನು ನಾವು ಬಳಸುತ್ತೇವೆ. ಅವು ದೊಡ್ಡ ಧ್ವಜಗಳನ್ನು ಹಾರಿಸಲು ಅನುಕೂಲಕರವಾಗಿರುತ್ತವೆ. ಮುಂಬಯಿಯ ಅಂಗಡಿಯೊಂದರಿಂದ ಖರೀದಿಸುವ ನೇಯ್ದ ಪಾಲಿಸ್ಟರ್‌ನಿಂದ ಮಾಡಿದ ಬಾವುಟವನ್ನು ಉಪಯೋಗಿಸುತ್ತೇವೆ ಎಂದು ಸಿಂಗ್ ಹೇಳಿದ್ದಾರೆ.

ವಿಶ್ವವಿದ್ಯಾಲಯಗಳ ಆಡಳಿತ ಕಚೇರಿ ತುತ್ತ ತುದಿಯಲ್ಲಿ 207 ಅಡಿ ಎತ್ತರದ ಸ್ತಂಭ ನಿರ್ಮಿಸಿ ಅದರಲ್ಲಿ ರಾಷ್ಟ್ರಧ್ವಜ ಹಾರಿಸಲು ತೀರ್ಮಾನಿಸಲಾಗಿತ್ತು.

ಕೇಂದ್ರೀಯ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆಯಲ್ಲಿ, ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಸಮಕ್ಷಮದಲ್ಲಿ ಎಲ್ಲ ವಿವಿಗಳಲ್ಲೂ ತ್ರಿವರ್ಣ ಧ್ವಜ ಹಾರಿಸುವ ತೀರ್ಮಾನವನ್ನು ಗುರುವಾರ ಕೈಗೊಳ್ಳಲಾಗಿತ್ತು.

ಕಳೆದ ಕೆಲ ದಿನಗಳಿಂದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಅಲ್ಲಿ ಮೊದಲನೆಯದಾಗಿ ಅನುಷ್ಠಾನ ಮಾಡಿ, ರಾಷ್ಟ್ರಧ್ವಜ ಹಾರಿಸಬೇಕೆಂದು ಸಭೆ ನಿರ್ಧರಿಸಿತು. ರಾಷ್ಟ್ರದ ಏಕತೆ, ಸಮಗ್ರತೆ ದ್ಯೋತಕವಾಗಿರುವ ರಾಷ್ಟ್ರಧ್ವಜದ ಅಡಿಯಲ್ಲಿ ಉನ್ನತ ಶಿಕ್ಷಣ ಅಭಿವೃದ್ಧಿಯಾಗುವುದು ಸೂಕ್ತ ಎನ್ನುವುದು ಸಭೆಯ ತೀರ್ಮಾನವಾಗಿತ್ತು.
http://m.vijaykarnataka.com/news/india/national-flag-installation-at-each-central-university-to-cost-rs-45-lakh/articleshow/51069216.cms

posted from Bloggeroid

No comments:

Post a Comment