Tuesday, February 16, 2016

ದೆಹಲಿ ಬದಲು ಬೆಂಗಳೂರಲ್ಲೇ ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಒ) ಕಾರ್ಯ ನಿರ್ವಹಿಸುವಂತಾದರೆ?

ದೆಹಲಿ ಬದಲು ಬೆಂಗಳೂರಲ್ಲೇ ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಒ) ಕಾರ್ಯ ನಿರ್ವಹಿಸುವಂತಾದರೆ?

ದೆಹಲಿ ಬದಲು ಬೆಂಗಳೂರಲ್ಲೇ ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಒ) ಕಾರ್ಯ ನಿರ್ವಹಿಸುವಂತಾದರೆ? ಖುದ್ದು ಪ್ರಧಾನಿಯೇ ತಿಂಗಳಲ್ಲಿ ಒಂದೆರಡು ದಿನ ಇಲ್ಲಿ ಲಭ್ಯರಿದ್ದರೆ? ಇದೆಲ್ಲ ಅಸಾಧ್ಯ ಎಂದು ಭಾವಿಸಬೇಕಿಲ್ಲ. ಅಷ್ಟೇ ಅಲ್ಲ, ಅಂತಹ ದಿನ ಹತ್ತಿರದಲ್ಲೇ ಬಂದರೂ ಅಚ್ಚರಿಪಡಬೇಕಿಲ್ಲ.

ಸ್ವಚ್ಛ ಭಾರತ ಅಭಿಯಾನ, ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಯೋಜನಾ ಮಂಡಳಿ ಬದಲು ನೀತಿ ಆಯೋಗ, ಪಂಚವಾರ್ಷಿಕ ಯೋಜನೆ ಬದಲು ರಾಷ್ಟ್ರೀಯ ಅಜೆಂಡಾ… ಹೀಗೆ ಹೊಸ ಹೊಸ ಆಲೋಚನೆಗಳೊಂದಿಗೆ ಮುಂದಡಿ ಇಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ವಿನೂತನ ಆಲೋಚನೆಗೆ ಮೂರ್ತರೂಪ ಕೊಡಲು ಮುಂದಾಗಿದ್ದಾರೆ. ದೇಶದ ರಾಜಧಾನಿಯಲ್ಲಿ ಒಂದೇ ಪ್ರಧಾನಿ ಕಾರ್ಯಾಲಯ ಹೊಂದುವ ಬದಲು ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪ್ರತ್ಯೇಕ ಕಾರ್ಯಾಲಯಗಳನ್ನು ತೆರೆದು ಕೇಂದ್ರ ಸರ್ಕಾರದ ಆಡಳಿತವನ್ನು ಇನ್ನಷ್ಟು ಚುರುಕುಗೊಳಿಸಲು, ಜನರ ಹತ್ತಿರಕ್ಕೆ ಕೊಂಡೊಯ್ಯಲು ಗಂಭೀರ ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ.

ಸಂಸದರ ಕೊರಗಿಗೆ ಉತ್ತರ: ಯೋಜನೆಯ ಪ್ರಕಾರ ತಿಂಗಳಲ್ಲಿ ಒಂದೆರಡು ದಿನ ಪ್ರಧಾನಿ, ಪಿಎಂಒ ಅಧಿಕಾರಿಗಳು ಹಾಗೂ ವಿವಿಧ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಪ್ರಾದೇಶಿಕ ಪಿಎಂಒ ಕಾರ್ಯಾಲಯದಲ್ಲಿ ಆಯಾ ವಲಯದ ಸಂಸದರೊಂದಿಗೆ ಮುಖಾಮುಖಿಯಾಗುತ್ತಾರೆ. ಪ್ರಮುಖ ಯೋಜನೆಗಳ ಜಾರಿ, ಹಣಕಾಸು ಬಿಡುಗಡೆಗೆ ತೀರ್ವನ, ಜಾರಿಯಲ್ಲಿರುವ ಯೋಜನೆಗಳ ಪ್ರಗತಿಯ ಪರಾಮರ್ಶೆ ಇತ್ಯಾದಿಗಳು ನಡೆಯುತ್ತವೆ. ಇದರಿಂದ, ಸಂಸದರ ಅಹವಾಲು ಆಲಿಕೆಗೆ, ಸ್ಥಳದಲ್ಲೇ ಯೋಜನೆಗಳಿಗೆ ಅನುಮೋದನೆ ಕೊಡಲು ಪ್ರಧಾನಿಗೆ ಅನುವಾದಂತಾಗುತ್ತದೆ. ದೆಹಲಿಗೆ ಹೋದರೆ ಪ್ರಧಾನಿ ಭೇಟಿ ಮಾಡಲು ಸಾಧ್ಯವಿಲ್ಲ, ಕ್ಷೇತ್ರದ ಕುಂದುಕೊರತೆಯನ್ನು ಹೇಳಿಕೊಳ್ಳುವುದು ಹೇಗೆ ಎಂಬ ಸಂಸದರ ಕೊರಗಿಗೆ ಪರಿಹಾರ ಹೇಳಲೂ ಈ ನಡೆ ಸಹಕಾರಿಯಾಗಲಿದೆ.

ಹೈಕೋರ್ಟ್ ಪೀಠಗಳು: ದೇಶದಲ್ಲಿ ಅನೇಕ

ಹೈಕೋರ್ಟ್ಗಳು ನ್ಯಾಯದಾನದ ಅನುಕೂಲಕ್ಕಾಗಿ ಪೀಠಗಳನ್ನು ಬೇರೆ ಬೇರೆ ಕಡೆಗಳಲ್ಲಿ ಸ್ಥಾಪಿಸಿದ್ದಿದೆ. ಕರ್ನಾಟಕದ ಧಾರವಾಡ, ಕಲಬುರಗಿಯಲ್ಲಿ ಹೈಕೋರ್ಟ್ ಪೀಠ ಕಾರ್ಯಾರಂಭ ಮಾಡಿದ್ದು ಉಲ್ಲೇಖನೀಯ.

ವ್ಯರ್ಥವಾಯಿತು ಬೆಳಗಾವಿ ಸೌಧ: ಆಡಳಿತ ವಿಕೇಂದ್ರೀಕರಣದ ಉದ್ದೇಶದಿಂದಲೇ ಈ ಹಿಂದೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಕಾಲದಲ್ಲಿ ನಿರ್ವಣವಾದ ಬೆಳಗಾವಿ ಸುವರ್ಣ ವಿಧಾನಸೌಧ ದೂರದೃಷ್ಟಿಯ ಕೊರತೆ ಮತ್ತು ಸೂಕ್ತ ಯೋಜನೆಯಲ್ಲಿ ಎಡವಿದ್ದರಿಂದ ಈಗ ಭೂತ ಬಂಗಲೆಯಾಗಿ, ಸಾರ್ವಜನಿಕರ ಹಣದ ಅಪವ್ಯಯಕ್ಕೆ ಉದಾಹರಣೆಯಾಗಿದೆ.

ಪ್ರಧಾನಿ ಕಾರ್ಯಾಲಯ ಸ್ವರೂಪ

ಪ್ರಧಾನಿ ಕಾರ್ಯನಿರ್ವಹಣೆಗೆ ನಿಕಟ ಸಂಬಂಧ ಹೊಂದಿರುವ ಹಾಗೂ ವರದಿ ನೀಡಬೇಕಿರುವ ಅಧಿಕಾರಿಗಳನ್ನು ಪಿಎಂಒ ಒಳಗೊಂಡಿರುತ್ತದೆ. ಪಿಎಂಒಗೆ ಪ್ರಧಾನ ಕಾರ್ಯದರ್ಶಿ ಮುಖ್ಯಸ್ಥರಾಗಿರುತ್ತಾರೆ. ಆಡಳಿತಕ್ಕೆ ಸಂಬಂಧಿಸಿ ಸಚಿವಾಲಯ ಮಟ್ಟದ ನೆರವನ್ನು ಪಿಎಂಒ ಪ್ರಧಾನಮಂತ್ರಿಗೆ ನೀಡುತ್ತದೆ. ಕಾರ್ಯಾಲಯದ ಅಧಿಕಾರಿಗಳ ಮೂಲಕ ಎಲ್ಲ ಸಚಿವರು, ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ಸಚಿವರೊಂದಿಗೆ ಪ್ರಧಾನಿ ಸಂವಹನ ನಡೆಸುತ್ತಾರೆ. ನವದೆಹಲಿಯ ಸಚಿವಾಲಯ ಭವನದ ಸೌತ್ಬ್ಲಾಕ್ನಲ್ಲಿ ಪಿಎಂಒ ಕಚೇರಿಯಿದೆ. ಭ್ರಷ್ಟಾಚಾರ ನಿಗ್ರಹ ದಳ, ಸಾರ್ವಜನಿಕ ಕುಂದುಕೊರತೆ ವಿಭಾಗ ಪಿಎಂಒ ವ್ಯಾಪ್ತಿಯಲ್ಲಿರುತ್ತವೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಇಲಾಖೆ, ಅಣುಶಕ್ತಿ ಹಾಗೂ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಇಲಾಖೆಗಳು ಪ್ರಧಾನಿ ವ್ಯಾಪ್ತಿಗೆ ಒಳಪಡುತ್ತವಾದರೂ ರಾಜ್ಯ ಅಥವಾ ಸಹಾಯಕ ದರ್ಜೆ ಸಚಿವರನ್ನು ನೇಮಿಸಿಕೊಳ್ಳಲಾಗುತ್ತದೆ. ನೃಪೇಂದ್ರ ಮಿಶ್ರಾ ಪಿಎಂಒದ ಪ್ರಧಾನ ಕಾರ್ಯದರ್ಶಿಯಾಗಿದ್ದರೆ, ಜಿತೇಂದ್ರ ಸಿಂಗ್ ಪ್ರಧಾನಿ ಕಾರ್ಯಾಲಯದ ಸಹಾಯಕ ಸಚಿವರಾಗಿದ್ದಾರೆ. ಪಿಎಂಒ ಹಾಗೂ ಇದಕ್ಕೆ ಸಂಬಂಧಿಸಿದ ಸಚಿವಾಲಯಗಳ ನೀತಿ ನಿರೂಪಣೆ ಜವಾಬ್ದಾರಿಯನ್ನು ಪ್ರಧಾನಿಯೇ ಹೊಂದಿರುತ್ತಾರಾದರೂ ಪಿಎಂಒ ಕುರಿತು ಕೇಳುವ ಪ್ರಶ್ನೆಗಳಿಗೆ ಸಂಸತ್ನಲ್ಲಿ ಉತ್ತರ ನೀಡುವುದು ಕಾರ್ಯಾಲಯದ ಸಹಾಯಕ ಸಚಿವರ ಜವಾಬ್ದಾರಿ. ರಾಷ್ಟ್ರೀಯ ಭದ್ರತಾ ಸಲಹೆಗಾರರೂ ಪಿಎಂಒ ವ್ಯಾಪ್ತಿಯಲ್ಲಿದ್ದು ಪ್ರಧಾನಿಗೆ ನೇರ ಉತ್ತರದಾಯಿಯಾಗಿರುತ್ತಾರೆ.

ಗುಜರಾತ್ ಮಾದರಿ?

ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ ‘ಎಂಎಲ್ಎ ದಿನ’ ಪರಿಕಲ್ಪನೆ ಜಾರಿಗೊಳಿಸಿದ್ದರು. ನಿಗದಿತ ದಿನದಂದು ಬೇರೆ ಬೇರೆ ಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ತೆರಳಿ ಠಿಕಾಣಿ ಹೂಡುತ್ತಿದ್ದರು. ಸ್ಥಳೀಯ ಶಾಸಕರೊಂದಿಗೆ ಒಂದು, ಎರಡು ದಿನ ಇದ್ದು ಆಯಾ ಭಾಗದ ಶಾಸಕರ ಅಹವಾಲನ್ನು ಖುದ್ದಾಗಿ ಆಲಿಸುತ್ತಿದ್ದರು. ಪ್ರಮುಖ ಯೋಜನೆಗಳ ಜಾರಿಗೆ ಸ್ಥಳದಲ್ಲೇ ನಿರ್ಧಾರ ಕೈಗೊಂಡು ಆದೇಶ ಹೊರಡಿಸುತ್ತಿದ್ದರು. ಮುಂದಿನ ಸಭೆ ಸೇರಿದಾಗ ಹಿಂದೆ ಘೊಷಣೆ ಮಾಡಿದ ಯೋಜನೆಗಳ ಪ್ರಗತಿ ಪರಾಮರ್ಶೆ ಮಾಡುತ್ತಿದ್ದರು. ಈಗ ಅದೇ ಮಾದರಿಯಲ್ಲಿ ಆಡಳಿತ ವಿಕೇಂದ್ರೀಕರಣ ಮಾಡಲು ಬಯಸಿ ದ್ದಾರೆ ಎಂಬುದು ಪಿಎಂಒ ಆಪ್ತ ಮೂಲಗಳ ಅಂಬೋಣ.

ಯೋಜನೆ ಏನು?

ದೇಶದ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಒಂದೊಂದು ಪ್ರತ್ಯೇಕ ಪಿಎಂಒ ಸ್ಥಾಪಿಸುವ ಈ ಮಹತ್ವಾಕಾಂಕ್ಷಿ ಯೋಜನೆ ಹಿಂದಿರುವುದು ಬಿಜೆಪಿ ನಾಯಕರಾದ ಅಮಿತ್ ಷಾ ಮತ್ತು ರಾಮ್ಾಧವ್.

ಉದ್ದೇಶ ಏನು?

ದೂರದ ದೆಹಲಿಯಲ್ಲಿ ಒಂದೇ ಪ್ರಧಾನಿ ಕಾರ್ಯಾಲಯ ಹೊಂದಿರುವುದರಿಂದ ಕೇಂದ್ರ ಸರ್ಕಾರದ ಆಡಳಿತ ಜನರ ಹತ್ತಿರಕ್ಕೆ ತಲುಪುತ್ತಿಲ್ಲ ಎಂಬ ಭಾವನೆ ಮುಂಚಿನಿಂದಲೂ ಇದೆ. ಅದನ್ನು ಹೋಗಲಾಡಿಸಿ ದೇಶದ ಉದ್ದಗಲಕ್ಕೂ ಪ್ರಧಾನಿ ಕಾರ್ಯಾಲಯದ ಪ್ರಭಾವಳಿಯನ್ನು ವಿಸ್ತರಿಸುವುದು ಈ ಯೋಜನೆಯ ಮೂಲ ಉದ್ದೇಶ ಎನ್ನಲಾಗಿದೆ.

ಇತಿಹಾಸದ ನೆನಪು

ಈ ಹಿಂದೆ ಬ್ರಿಟಿಷ್ ವೈಸ್ರಾಯ್ಗಳು ರಾಜ್ಯಭಾರ ಮಾಡುತ್ತಿದ್ದ ಕಾಲದಲ್ಲಿ ದೆಹಲಿಯಲ್ಲಿ ಈಗಿನ ರಾಷ್ಟ್ರಪತಿ ಭವನವನ್ನು ನಿರ್ವಿುಸಿದ್ದರು. ಹಾಗೆಯೇ ಬೇಸಿಗೆ ಕಾಲದಲ್ಲಿ ಸೆಕೆಯಿಂದ ಪಾರಾಗಿ ಹಿತಕರ ಹವಾಕ್ಕೆಂದು ಶಿಮ್ಲಾದ ಪರ್ವತತಾಣದಲ್ಲಿ ಎರಡನೇ ರಾಷ್ಟ್ರಪತಿ ಭವನ ನಿರ್ವಿುಸಿಕೊಂಡಿದ್ದರು.

ಆಡಳಿತಕ್ಕೆ ವೇಗ ಯೋಜನೆ ಆಶಯ

ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪಿಎಂಒ ತೆರೆದು ವ್ಯಾಪ್ತಿಯನ್ನು ವಿಸ್ತರಿಸುವುದರ ಜೊತೆಗೆ ಕೇಂದ್ರ ಸರ್ಕಾರದ ಆಡಳಿತ ವ್ಯವಸ್ಥೆಗೆ ಚುರುಕು ನೀಡುವುದು ಈ ಯೋಜನೆಯ ಮೂಲ ಆಶಯ.

ಬೆಂಗಳೂರು, ಕಾಶ್ಮೀರ, ವಾರಾಣಸಿ ಹೆಸರು ಪರಿಶೀಲನೆಯಲ್ಲಿ

ಉತ್ತರ ವಲಯದ ಪ್ರಧಾನಿ ಕಾರ್ಯಾಲಯವನ್ನು ಸೂಕ್ಷ್ಮ ರಾಜಕೀಯ ವ್ಯವಸ್ಥೆಗೆ ಸಾಕ್ಷಿಯಾಗಿರುವ ಕಾಶ್ಮೀರದಲ್ಲಿ ತೆರೆಯಲು ಪ್ರಧಾನಿ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಅದನ್ನು ಹೊರತುಪಡಿಸಿ, ಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಾಣಸಿಯ ಹೆಸರೂ ಚಾಲ್ತಿಯಲ್ಲಿದೆ ಎನ್ನಲಾಗಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕದ ಬೆಂಗಳೂರಿನ ಬಗ್ಗೆ ಹೆಚ್ಚಿನ ಒಲವು ಹೊಂದಲಾಗಿದೆ ಎನ್ನುತ್ತವೆ ಉನ್ನತ ಮೂಲಗಳು. ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಬಿಜೆಪಿ ಬಲಿಷ್ಠ ನೆಲೆ ಹೊಂದಿರುವುದು ಮತ್ತು ಕರ್ನಾಟಕದ ಮೂಲಕ ದಕ್ಷಿಣದ ರಾಜ್ಯಗಳಲ್ಲಿ ಪಕ್ಷದ ನೆಲೆ ವಿಸ್ತರಿಸಿಕೊಳ್ಳುವ ಆಲೋಚನೆ ಇದಕ್ಕೆ ಕಾರಣ.

ದೇಶದ ಒಕ್ಕೂಟ ವ್ಯವಸ್ಥೆಗೆ ಬಲ

ಭಾಷಾವಾರು ಪ್ರಾಂತ್ಯಗಳ ರಚನೆಯ ನಂತರ ಕಾಲಕಾಲಕ್ಕೆ ಆದ ಬೆಳವಣಿಗೆಗಳಲ್ಲಿ ರಾಜ್ಯಗಳಲ್ಲಿ ಪ್ರತ್ಯೇಕತೆಯ ಭಾವನೆ ಗಟ್ಟಿಗೊಳ್ಳುತ್ತ ಬಂದಿರುವುದು ಭಾರತದ ಒಕ್ಕೂಟ ವ್ಯವಸ್ಥೆಯ ಮೂಲ ಆಶಯಕ್ಕೇ ಮಾರಕವಾಗುತ್ತಿದೆ. ಅದಕ್ಕಿಂತ ಮುಖ್ಯವಾಗಿ ಆಯಾ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳ ಧೋರಣೆ ಫಲವಾಗಿ ಕೇಂದ್ರ-ರಾಜ್ಯ ಸರ್ಕಾರಗಳ ಸಂಬಂಧವೇ ಸೂಕ್ಷ್ಮವಾಗುತ್ತಿದೆ. ಹೀಗಾಗಿ, ಕನಿಷ್ಠ ಒಂದು ವಲಯದಲ್ಲಿ ಒಂದು ಪ್ರಧಾನಿ ಕಾರ್ಯಾಲಯ ಹೊಂದಿದರೆ ದೇಶದ ಸಮಗ್ರತೆ ಕಲ್ಪನೆಗೂ ಬಲ ಬರುತ್ತದೆ, ಕೇಂದ್ರದ ಅಸ್ತಿತ್ವವೂ ಗಟ್ಟಿಗೊಳ್ಳುತ್ತದೆ ಎಂಬುದು ಪಿಎಂಒ ಚಿಂತಕರ ಚಾವಡಿಯ ಲೆಕ್ಕಾಚಾರ ಎನ್ನಲಾಗಿದೆ.

posted from Bloggeroid

No comments:

Post a Comment