Monday, February 15, 2016

ಯಜ್ಞೋಪವೀತ ಭಾಗ - ಒಂದು

ಯಜ್ಞೋಪವೀತ ಭಾಗ - ಒಂದು
http://www.fightforright.co/Archives/ArticleID/35349/2007#135
ಯಜ್ಞೋಪವೀತ ಭಾಗ - ಒಂದು
ಪ್ರದೀಪ ಹೆಗಡೆ ಸನಾತನ ಸಂಸ್ಕೃತಿ, Recent Posts 2/14/2016 7:52:00 PM 1 Comments View Count 1432 Return
ಯಜ್ಞೋಪವೀತ ಭಾಗ - ಒಂದು
ಯಜ್ಞೋಪವೀತಕ್ಕೆ ಉಪವೀತ,ಯಜ್ಞಸೂತ್ರ,ವ್ರತಬಂಧ,ಬಲಬಂಧ,ಮೊನೀಬಂಧ ಹಾಗೂ ಬ್ರಹ್ಮಸೂತ್ರ
ಎಂಬ ಹಲವಾರು ಹೆಸರುಗಳಿವೆ.ಕನ್ನಡದಲ್ಲಿ ಯಜ್ಞೋಪವೀತಕ್ಕೆ ಜನಿವಾರವೆಂದು
ಕರೆಯುತ್ತಾರೆ.ಯಜ್ಞೋಪವೀತವನ್ನು ಧರಿಸುವ ಪರಂಪರೆ ಬಹಳ ಪ್ರಾಚೀನವಾದದ್ದು.ಉಪನಯನದ
ಅನಂತರ ಯಜ್ಞೋಪವೀತವನ್ನು ಧರಿಸಲಾಗುತ್ತದೆ.

"ಉಪನಯನ" ಎಂದರೆ ಹತ್ತಿರಕ್ಕೆ ತರುವುದು.ಯಾರ ಹತ್ತಿರ? ಎಂದರೆ,ಬ್ರಹ್ಮಜ್ಞಾನದ
ಹತ್ತಿರ.ಹಿಂದೂಧರ್ಮದ ಷೋಡಶಸಂಸ್ಕಾರಗಳಲ್ಲಿ ಉಪನಯನವೂ ಒಂದು.ಉಪನಯನ ಸಂಸ್ಕಾರದಲ್ಲಿ
ಯಜ್ಞೋಪವೀತದ ಧಾರಣೆಯಾಗುತ್ತದೆ.ಉಪನಯನಕ್ಕೆ "ಯಜ್ಞೋಪವೀತಸಂಸ್ಕಾರ" ಎಂಬ ಹೆಸರೂ
ಇದೆ.ಮುಂಡನ ಹಾಗೂ ಪವಿತ್ರಜಲದಲ್ಲಿ ಸ್ನಾನ ಉಪನಯನಸಂಸ್ಕಾರದ ಅಂಗಗಳಾಗಿವೆ.

ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಅನೇಕ ನಿಯಮಗಳನ್ನು ಅನಿವಾರ್ಯವಾಗಿ ಪಾಲಿಸಲೇ
ಬೇಕಾಗುತ್ತದೆ.ಒಂದು ಸಲ ಜನಿವಾರವನ್ನು ಧರಿಸಿದ ಮೇಲೆ ಯಾವುದೇ ಕಾರಣಕ್ಕೂ
ಜನಿವಾರವನ್ನು ಧರಿಸದೇ ಬಿಡುವಂತಿಲ್ಲ.ಜನಿವಾರ ಹಳೆಯದಾದರೆ,ಅದನ್ನು ವಿಸರ್ಜಿಸಿ ಕೂಡಲೇ
ಹೊಸಜನಿವಾರವನ್ನು ಧರಿಸಬೇಕಾಗುತ್ತದೆ.

ಪ್ರತಿಯೊಬ್ಬ ಹಿಂದುವೂ ಜನಿವಾರವನ್ನು ಧರಿಸಬಹುದು.ಅದಕ್ಕೆ ಯಾವುದೇ
ಅಡೆತಡೆಗಳಿಲ್ಲ.ಆದರೆ ಜನಿವಾರವನ್ನು ಧರಿಸಿದ ಮೇಲೆ ಅದರ ನಿಯಮಗಳನ್ನು ಕಡ್ಡಾಯವಾಗಿ
ಪಾಲಿಸಬೇಕಾಗುತ್ತದೆ.ಆಗಲೇ ಯಜ್ಞೋಪವೀತಧಾರಣೆಯ ಉದ್ದೇಶ ಸಫಲವಾಗುತ್ತದೆ.ನಿಯಮಗಳನ್ನು
ಪಾಲಿಸದ ವ್ಯಕ್ತಿಯ ಯಜ್ಞೋಪವೀತ ಕೇವಲ ನೂಲಿನ ಎಳೆಯಾಗಿರುತ್ತದೆ...!!

ಯಾವ ಸ್ತ್ರೀ ಆಜೀವನಪರ್ಯಂತ ಬ್ರಹ್ಮಚರ್ಯವನ್ನು ಪಾಲಿಸುತ್ತಾಳೋ ಅಂತಹ ಸ್ತ್ರೀ ಕೂಡ ಯಜ್ಞೋಪವೀತಸಂಸ್ಕಾರಕ್ಕೆ ಅರ್ಹಳಾಗಿರುತ್ತಾಳೆಂದು ಧರ್ಮಶಾಸ್ತ್ರಗಳು ಹೇಳಿವೆ.ಬ್ರಹ್ಮಚಾರಿಗಳು ಒಂದು ಯಜ್ಞೋಪವೀತ,ಗೃಹಸ್ಥರು ಎರಡು ಯಜ್ಞೋಪವೀತಗಳನ್ನು ಧರಿಸಬೇಕೆಂದು ಶಾಸ್ತ್ರಗಳು ಹೇಳಿವೆ.ಗೃಹಸ್ಥರ ಒಂದು ಯಜ್ಞೋಪವೀತ ಅವರ ಜೀವನಸಂಗಾತಿಗೆ ಮುಡಿಪಾಗಿರುತ್ತದೆ.

ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ.ಮೊದಲನೇ ಎಳೆ ಬ್ರಹ್ಮ,ವಿಷ್ಣು,ಮಹೇಶ್ವರರೆಂಬ ತ್ರಿಮೂರ್ತಿಗಳ ಪ್ರತೀಕವಾಗಿದೆ.ಎರಡನೆಯ ಎಳೆ ದೇವಋಣ,ಪಿತೃಋಣ,ಋಷಿಋಣಿಗಳ ಪ್ರತೀಕವಾಗಿದೆ.ಮೂರನೆಯ ಎಳೆ ಸತ್ವಗುಣ,ರಜೋಗುಣ,ತಮೋಗುಣಗಳ ಪ್ರತೀಕವಾಗಿದೆ.
ಮೂರು ಪ್ರಮುಖ ಎಳೆಗಳಲ್ಲಿ ಒಂದೊಂದರಲ್ಲಿ ಪುನಃ ಮೂರು ಉಪ ಎಳೆಗಳಿರುತ್ತವೆ.ಹಾಗಾಗಿ ಒಟ್ಟೂ ಯಜ್ಞೋಪವೀತದಲ್ಲಿರುವ ಎಳೆಗಳು ಒಂಬತ್ತು.ಒಂದು ಮುಖ,ಎರಡು ಮೂಗಿನ ಹೊಳ್ಳೆಗಳು,ಎರಡು ಕಣ್ಣುಗಳು,ಎರಡು ಕಿವಿಗಳು,ಮಲ ಹಾಗೂ ಮೂತ್ರದ್ವಾರಗಳಿಂದ ಒಂದು ಶರೀರದ ರಚನೆಯಾಗುತ್ತದೆ.ಹಾಗೇ ಯಜ್ಞೋಪವೀತವೂ ಸಹ ಒಂಬತ್ತು ಎಳೆಗಳಿಂದ ಜೀವಾತ್ಮವನ್ನು ಪ್ರತಿನಿಧಿಸುತ್ತದೆ.ಹಾಗೇ ಮುಖದಿಂದ ಒಳ್ಳೆಯಮಾತು,ಒಳ್ಳೆಯ ಆಹಾರಗಳನ್ನು ಸೇವಿಸಬೇಕು,ಕಣ್ಣಿನಿಂದ ಒಳ್ಳೆಯವಿಷಯಗಳನ್ನು ನೋಡಬೇಕು,ಕಿವಿಯಿಂದ ಒಳ್ಳೆಯ ವಿಷಯಗಳನ್ನು ಕೇಳಬೇಕೆಂಬ ತತ್ವವನ್ನೂ ಯಜ್ಞೋಪವೀತ ಸಾರುತ್ತದೆ.

ಯಜ್ಞೋಪವೀತದಲ್ಲಿರುವ ಬ್ರಹ್ಮಗಂಟು ಐದು ಗಂಟುಗಳಿಂದ ಕೂಡಿರುತ್ತದೆ.ಐದು ಗಂಟುಗಳು ಬ್ರಹ್ಮಜ್ಞಾನ,ಧರ್ಮ,ಅರ್ಥ,ಕಾಮ ಹಾಗೂ ಮೋಕ್ಷದ ಪ್ರತೀಕವಾಗಿದೆ.ಹಾಗೇ ಪಂಚಯಜ್ಞ,ಪಂಚ ಜ್ಞಾನೇಂದ್ರಿಯ,ಪಂಚಕರ್ಮಗಳನ್ನು ಪ್ರತಿನಿಧಿಸುತ್ತದೆ.

ಯಜ್ಞೋಪವೀತದ ಉದ್ದ ೯೬ ಇಂಚುಗಳಷ್ಟಿರಬೇಕು.ಏಕೆಂದರೆ ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿಗೆ ೬೪ ಕಲೆಗಳನ್ನು ಹಾಗೂ ೩೨ ವಿದ್ಯೆಗಳನ್ನು ಕಲಿಯುವ ಹಂಬಲವಿರಬೇಕು.ಆತ ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕು.ನಾಲ್ಕು ವೇದಗಳು,ನಾಲ್ಕು ಉಪವೇದಗಳು,ಆರು ಅಂಗಗಳು,ಆರು ದರ್ಶನಗಳು,ಮೂರು ಸೂತ್ರಗ್ರಂಥಗಳು,ಒಂಬತ್ತು ಆರಣ್ಯಕಗಳನ್ನು ಸೇರಿಸಿದರೆ ಮೂವತ್ತೆರಡು ವಿದ್ಯೆಗಳಾಗುತ್ತವೆ.ವಾಸ್ತು ನಿರ್ಮಾಣ,ಚಿತ್ರಕಲೆ,ಸಾಹಿತ್ಯ,ಯಂತ್ರನಿರ್ಮಾಣ,ಆಭರಣ ತಯಾರಿಕೆ,ಕೃಷಿ ಜ್ಞಾನ ಮುಂತಾದವು.ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಈ ವಿದ್ಯೆಗಳನ್ನು ಕಲಿಯಲು ಪ್ರಯತ್ನಿಸಬೇಕೆಂದು ಶಾಸ್ತ್ರಗಳು ತಿಳಿಸುತ್ತವೆ.

ಯಜ್ಞೋಪವೀತದ ಧಾರಣೆ ಗಾಯಂತ್ರಿ ಮಂತ್ರದಿಂದಾಗುತ್ತದೆ.ಗಾಯತ್ರಿಮಂತ್ರ ಹಾಗೂ ಯಜ್ಞೋಪವೀತದ ಸಮ್ಮಿಲನವೇ ದ್ವಿಜತ್ವ.ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ ಹಾಗೇ ಗಾಯತ್ರಿಮಂತ್ರದಲ್ಲೂ ಸಹ ಮೂರು ಚರಣಗಳಿವೆ.”ತತ್ಸವಿತುರ್ವರೇಣ್ಯಮ್” ಮೊದಲ ಚರಣ.”ಭರ್ಗೋ ದೇವಸ್ಯ ಧೀಮಹೀ” ಎರಡನೇ ಚರಣ.”ಧಿಯೋ ಯೋನಃ ಪ್ರಚೋದಯಾತ್” ಮೂರನೇ ಚರಣ.

ಯಜ್ಞೋಪವೀತವನ್ನು ಧರಿಸುವಾಗ ಹೇಳುವ ಮಂತ್ರ...

“ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರಂ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜಃ ||”
ಯಜ್ಞೋಪವೀತ ಪರಮ ಪವಿತ್ರವಾದದ್ದು,ಪ್ರಜಾಪತಿಗಿಂತಲೂ ಮೊದಲೇ ಉತ್ಪನ್ನಗೊಂಡಿದ್ದು,ಆಯುಷ್ಯವನ್ನು ಹೆಚ್ಚಿಸುವಂತದ್ದು,ಮನುಷ್ಯನನ್ನು ಶುಭ್ರ ಮಾಡುವಂತದ್ದು,ಯಜ್ಞೋಪವೀತ ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು.
ಹಾಗಾಗಿ ಯಜ್ಞೋಪವೀತಧಾರಣೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ..

(ಮುಂದುವರಿಯುತ್ತದೆ)

posted from Bloggeroid

No comments:

Post a Comment