Monday, February 15, 2016

ಗಾಯತ್ರಿ ಪ್ರತಿಪಾದ್ಯ ನಾರಾಯಣನನ್ನು ಚಿಂತಿಸುವ ರೂಪ ಹೀಗಿದೆ:


ಗಾಯತ್ರಿ ಪ್ರತಿಪಾದ್ಯ ನಾರಾಯಣನನ್ನು ಚಿಂತಿಸುವ ರೂಪ ಹೀಗಿದೆ: ಉದಯಿಸಿರುತ್ತಿರುವ ಸೂರ್ಯಮಂಡಲದ ಮಧ್ಯದಲ್ಲಿ ಕಮಲದ ಮೇಲೆ ಪದ್ಮಾಸನ ಹಾಕಿ ಕುಳಿತು ಕೊಂಡಿರುವವನು, ತೋಳುಗಳಲ್ಲಿ ತೋಳುಬಳೆ, ಕಿವಿಗಳಲ್ಲಿ ಮೊಸಳೆಯಾಕರದ ಕುಂಡಲಗಳು (ಮಕರ ಕುಂಡಲ), ತಲೆಯ ಮೇಲೆ ಕಿರೀಟ, ಕೊರಳಿನಲ್ಲಿ ಹಾರ ವಿರಾಜಿಸುತ್ತಿದೆ. ಕೈಗಳಲ್ಲಿ ಶಂಖ, ಚಕ್ರವನ್ನು ಹಿಡಿದಿರುವನು. ಇನ್ನೆರಡು ಕೈಗಳು ಪದ್ಮಾಸನದಲ್ಲಿ, ಚಿನ್ನದ ಮೈಬಣ್ಣ. ಇಂತಹ ನಾರಾಯಣನನ್ನು ಧ್ಯಾನಿಸಬೇಕು.
ಮೇಲೆ ಹೇಳಿದ ರೂಪದ ಸಾಂಕೇತಿಕ ಅರ್ಥ ಹೀಗಿದೆ:
1. ಚಿನ್ನದ ಬಣ್ಣ ರಜೋಗುಣವನನ್ನೂ ಹಾಗೂ ಗಾಯತ್ರಿಯಲ್ಲಿರುವ ಸವಿತೃ ಶಬ್ದವು ಸೂರ್ಯನಾರಾಯಣನಾಗಿ ನಡೆಸುವ ಸೃಷ್ಟಿಕಾರ್ಯವನ್ನೂ, ಕಾಲನಾಗಿ ನಮ್ಮ ಆಯುಸ್ಸನ್ನು ಕಬಳಿಸುವುದನ್ನು ಸೂಚಿಸುತ್ತದೆ. ಹಾಗೆಯೇ ಚಿನ್ನವು ಶುಭ್ರತೆ ಮತ್ತು ಭಗವಂತನ ವೈಭವದ ಸಂಕೇತ. ಸಾಕ್ಷಾತ್ಕಾರದಲ್ಲಿ ಜ್ಞಾನಿಯು ಕಾಣುವ ಭಗವದ್ರೂಪ ಚಿನ್ನದ ಬಣ್ಣದ್ದು. (ಯದಾ ಪಶ್ಯಃ ಪಶ್ಯತೇ ರುಕ್ಮ ವರ್ಣಂ)
2. ಭಗವಂತನಿಗೆ ತನ್ನ ರಕ್ಷಣೆಗಾಗಲೀ, ಭಕ್ತರ ರಕ್ಷಣೆಗಾಗಲೀ ಆಯುಧಗಳನ್ನು ಧರಿಸುವ ಅಗತ್ಯವಿಲ್ಲ. ಸುದರ್ಶನ ಚಕ್ರವು ದುಷ್ಟರ, ದೋಷಗಳ ದಮನದ ಸಂಕೇತ. ಅದರ ಧಾರಣೆಯಿಂದ ನಾರಾಯಣನು ತನ್ನ ಭಕ್ತರ ದೋಷಗಳನ್ನೂ ಅವನ್ನು ನಿಯಂತ್ರಿಸುವ ದುಷ್ಟರನ್ನೂ ಸದೆಬಡಿಯುವಿಕೆಯನ್ನು ಸೂಚಿಸುತ್ತದೆ.
3. ಶಂಖ ವಿದ್ಯೆಯ ಸೂಚಕ. ನಾರಾಯಣನು ತನ್ನ ಭಕ್ತರಿಗೆ ವಿದ್ಯಾಬುಧ್ಧಿಗಳನ್ನು ನೀಡುವನು.
4. ಸ್ವಾಭಾವಿಕನಾಗಿ ಸುಂದರನಾದ ಭಗವಂತನಿಗೆ ಆಭರಣಗಳಿಂದ ಏನೂ ಆಗಬೇಕಾಗಿಲ್ಲ. ಅದರ ಮೂಲಕ ಸಾಂಕೇತಿಕ ಸಂದೇಶವನ್ನು ಸಾರುವುದೇ ಉದ್ದೇಶ. ಕಿರೀಟವು ಬೃಹ್ಮಾಂಡ ನಾಯಕತ್ವವನ್ನು ಸೂಚಿಸುವುದು.
5. ಎದೆಯ ಮೇಲಿರುವ ಹಾರ ಭಕ್ತರ ಭಕ್ತಿಪೂರ್ವಕ ಕೊಡುಗೆಗಳನ್ನು ಹೃತ್ಪೂರ್ವಕವಾಗಿ ಸ್ವೀಕರಿಸುವ ಅವನ ಹೃದಯವಂತಿಕೆಯ ಸಂಕೇತ.
6. ಮಕರಕುಂಡಲವು ಅವನ ಭಕ್ತರಿಂದ ಹರಿದು ಬರುವ ಸ್ತುತಿಯನ್ನು ಕೇಳಲು ಸಿದ್ಧವಾಗಿರುವ ಕಿವಿಗಳ ದೊಡ್ಡತನವನ್ನು ತೋರಿಸುತ್ತದೆ.
7. ಲಕ್ಷ್ಮೀದೇವಿಯ ರೂಪವಾಗಿರುವ ತೋಳ್ಬಳೆಗಳಿಂದ ಬದ್ಧವಾಗಿರುವ ತೋಳುಗಳು ಸರ್ವತಂತ್ರ ಸ್ವತಂತ್ರನಾದ ಭಗವಂತ ಭಕ್ತರ ಭಕ್ತಿಗೆ ಒಲಿದು ಬಂಧನಕ್ಕೆ ಒಳಗಾಗುವನು ಎಂದು ಸೂಚಿಸುತ್ತದೆ.

posted from Bloggeroid

No comments:

Post a Comment