Sunday, February 14, 2016

ಸಿಎಂ ಆಸ್ತಿ ವಿವರದಲ್ಲಿ ಡೈಮಂಡ್ ವಾಚ್ ಪ್ರಸ್ತಾಪವಿಲ್ಲ!

ಸಿಎಂ ಆಸ್ತಿ ವಿವರದಲ್ಲಿ ಡೈಮಂಡ್ ವಾಚ್ ಪ್ರಸ್ತಾಪವಿಲ್ಲ!
BY ವಿಜಯವಾಣಿ ನ್ಯೂಸ್ · FEB 11, 2016

State 10
ವಿ. ಮುರಳೀಧರ|

ಬೆಂಗಳೂರು: ಭಾರಿ ವಿವಾದಕ್ಕೆ ಕಾರಣವಾಗಿರುವ ದುಬಾರಿ ಡೈಮಂಡ್ ವಾಚಿನ ವಿವರವನ್ನು ಸಿಎಂ ಸಿದ್ದರಾಮಯ್ಯ ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ದಾಖಲೆಯಲ್ಲೂ ನಮೂದಿಸಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ರಾಜ್ಯಾದ್ಯಂತ ಕುತೂಹಲಕ್ಕೆ ಕಾರಣವಾಗಿರುವ 70 ಲಕ್ಷ ರೂ. ಮೌಲ್ಯದ ಹೂಬ್ಲೊಟ್ ಕೈಗಡಿಯಾರದ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ದಿನಕ್ಕೊಂದು ಮಾಹಿತಿ ಬಹಿರಂಗ ಪಡಿಸುತ್ತಿರುವುದು ಸಿದ್ದರಾಮಯ್ಯ ನಿದ್ದೆಗೆಡಿಸುತ್ತಿದೆ. ಆದರೆ, ಈ ದುಬಾರಿ ಕೈಗಡಿಯಾರದ ಮಾಹಿತಿಯನ್ನು ಸಿದ್ದರಾಮಯ್ಯ 2015 ಮಾರ್ಚ್ 31 ರಂದು ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರ ಪ್ರಮಾಣ ಪತ್ರದಲ್ಲಿ ನಮೂದಿಸಿಲ್ಲ ಎಂಬುದು ವಿಶೇಷ.

ನಿಯಮದ ಪ್ರಕಾರ, ಯಾವುದೇ ಮೌಲ್ಯಯುತ ವಸ್ತುವನ್ನು ಸ್ವತಃ ಖರೀದಿಸಿದ್ದರೂ, ಇಲ್ಲವೇ ಉಡುಗೊರೆ ರೂಪದಲ್ಲಿ ಪಡೆದಿದ್ದರೂ ಆಸ್ತಿ ವಿವರದಲ್ಲಿ ನಮೂದಿಸಬೇಕು.

ಕುಟುಂಬಕ್ಕೆ ಸಾಲ: ಸಿದ್ದರಾಮಯ್ಯ ಸಿಎಂ ಆದ ಬಳಿಕ ಪತ್ನಿ ಪಾರ್ವತಿ ಹಾಗೂ ಪುತ್ರ ಡಾ. ಯತೀಂದ್ರ ಅವರಿಗೆ ದೊಡ್ಡ ಮೊತ್ತದ ಸಾಲ ನೀಡಿದ್ದಾರೆ. ಪುತ್ರನಿಗೆ 2013 ಸೆ. 2ರಂದು 40 ಲಕ್ಷ ರೂ. ನೀಡಿದ್ದಾರೆ. ಪತ್ನಿ ಪಾರ್ವತಿ ಅವರಿಗೆ ಸುಮಾರು 3 ಕೋಟಿ ರೂ.ನಷ್ಟು ಸಾಲರೂಪದಲ್ಲಿ ನೀಡಿರುವುದು ದಾಖಲೆಗಳಲ್ಲಿ ಉಲ್ಲೇಖವಾಗಿದೆ.

ಮುಖ್ಯಮಂತ್ರಿಗಳ ಆದಾಯ ವಿವರ

ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರದ ಪ್ರಕಾರ, ಸಿದ್ದರಾಮಯ್ಯ ಅವರಿಗೆ ಕೃಷಿ ಆದಾಯ ವಾರ್ಷಿಕ 2 ಲಕ್ಷ ರೂ. ಇದ್ದರೆ, ಮೂರು ಕಂಪನಿಗಳಿಗೆ ನೀಡಿರುವ ಕಟ್ಟಡಗಳ ಬಾಡಿಗೆ ರೂಪದಲ್ಲಿ ವಾರ್ಷಿಕ 38 ಲಕ್ಷ ರೂ. ಆದಾಯ ಬರುತ್ತಿದೆ. ಪತ್ನಿ ಪಾರ್ವತಿ ಅವರಿಗೆ ಬ್ಯಾಂಕಿನಲ್ಲಿಟ್ಟಿರುವ ಠೇವಣಿ ಹಣದ ಬಡ್ಡಿ 1.25 ಲಕ್ಷ ರೂ. ಬರುತ್ತಿದೆ. ಇಬ್ಬರು ಪುತ್ರರು ಒಳಗೊಂಡ ಅವಿಭಕ್ತ ಕುಟುಂಬಕ್ಕೆ ಕೃಷಿ ಮೂಲದಿಂದ 25 ಲಕ್ಷ ರೂ. ಆದಾಯ ಬರುತ್ತಿದೆ. ಆಸ್ತಿ ವಿವರ ಸಲ್ಲಿಸುವ ದಿನಾಂಕಕ್ಕೆ ಸಿಎಂ ಕೈಯಲ್ಲಿದ್ದ ನಗದು 2 ಲಕ್ಷ ರೂ. ವಿಧಾನಸೌಧ ಎಸ್​ಬಿಎಂ ಬ್ಯಾಂಕ್ ಉಳಿತಾಯ ಖಾತೆಯಲ್ಲಿ 19 ಲಕ್ಷ ರೂ, ವಿಜಯನಗರ ಸಿಂಡಿಕೇಟ್ ಬ್ಯಾಂಕ್​ನಲ್ಲಿ 17 ಲಕ್ಷ ರೂ. ಮೈಸೂರಿನ ವಿಜಯ ಬ್ಯಾಂಕ್​ನಲ್ಲಿ 5 ಲಕ್ಷ ರೂ. ಹೊಂದಿರುವುದಾಗಿ ಘೊಷಣೆ ಮಾಡಿಕೊಂಡಿದ್ದಾರೆ.

3 ಕೋಟಿ ಸಾಲಗಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ದುಬಾರಿ ಮೊತ್ತ ನೀಡಿದ ದಿನವೇ ಬಾಲಾಜಿ ಕನ್​ಸ್ಟ್ರಕ್ಷನ್ ಲಿ. ವತಿಯಿಂದ 1.48 ಕೋಟಿ ರೂ. ಹಾಗೂ ಎಲ್. ವಿವೇಕಾನಂದ ಅವರಿಂದ 1.30 ಕೋಟಿ ಸೇರಿ ಬರೋಬ್ಬರಿ 3 ಕೋಟಿ ರೂ. ನಷ್ಟು ಸಾಲ ಪಡೆದಿರುವುದಾಗಿ ಘೊಷಣೆ ಮಾಡಿಕೊಂಡಿದ್ದಾರೆ. ಉಳಿದಂತೆ ಮೈಸೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ನಿವೇಶನ ಖರೀದಿ, ಮಾರಾಟವೂ ನಡೆದಿದೆ.

ಸ್ವತಃ ಖರೀದಿಸಿರಲಿ ಅಥವಾ ಉಡುಗೊರೆಯೇ ಬಂದಿರಲಿ, ಆಸ್ತಿ ವಿವರ ಸಲ್ಲಿಸುವಾಗ ನಮೂದಿಸುವುದು ಕಡ್ಡಾಯ.

| ಉದಯ್ ಹೊಳ್ಳ, ಮಾಜಿ ಅಡ್ವೋಕೇಟ್ ಜನರಲ್

ನಿಲ್ಲದ ಸಿದ್ದು-ಎಚ್ಡಿಕೆ ವಾಚ್​ವಾರ್

ಬೆಂಗಳೂರು: ಹಾಲಿ, ಮಾಜಿ ಸಿಎಂಗಳ ನಡುವಿನ ಕೈಗಡಿಯಾರ, ಕೂಲಿಂಗ್ ಗ್ಲಾಸ್ ವಾಕ್ಸಮರ ಮುಂದುವರಿದಿದ್ದು, ಇಬ್ಬರ ನಡುವಿನ ‘ವಾಚ್’ಸಮರ ಸಾರ್ವಜನಿಕರಿಗೆ ಮನರಂಜನೆ ನೀಡುತ್ತಿದೆ.

ಹ್ಯೂಬ್ಲೊಟ್ ವಾಚ್ ಬೆಲೆಯನ್ನು ಬಹಿರಂಗ ಪಡಿಸಿದ ಕುಮಾರಸ್ವಾಮಿ ವಿರುದ್ಧ ತಿರುಗಿ ಬಿದ್ದಿರುವ ಸಿದ್ದರಾಮಯ್ಯ, ‘ನಿಮ್ಮ ಮಗ ಕೋಟ್ಯಂತರ ರೂ. ಮೌಲ್ಯದ ಕಾರು ತೆಗೆದುಕೊಂಡಿದ್ದು, ಕೋಟಿಗಟ್ಟಲೆ ವೆಚ್ಚದಲ್ಲಿ ಸಿನಿಮಾ ಮಾಡ್ತಿದ್ದಾರಲ್ಲಾ.., ಅದೆಲ್ಲಾ ನಿಮ್ಮ ಮಗನೇ ದುಡಿದಿದ್ದಾ..!’ ಎಂದು ಪ್ರಶ್ನಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಸಿಎಂ ಮಾತನಾಡಿ, ‘ನಿಮ್ಮ ಮಗ ಓಡಾಡುವ ಐಷಾರಾಮಿ ಕಾರು ಆತ ದುಡಿದು ತೆಗೆದುಕೊಂ ಡಿದ್ದಾ.., ಅಷ್ಟೊಂದು ದುಡ್ಡು ಎಲ್ಲಿಂದ ಬಂತು?’ ಎಂದು ಕುಮಾರಸ್ವಾಮಿ ಅವರನ್ನು ಕೆಣಕಿದರು. ಗಾಜಿನ ಮನೆಯಲ್ಲಿ ಕುಳಿತು ಇನ್ನೊಬ್ಬರಿಗೆ ಕಲ್ಲು ಹೊಡೆಯುವ ಪ್ರಯತ್ನ ಮಾಡಬೇಡಿ ಎಂದು ಸಲಹೆ ನೀಡಿದರು.

ಎಚ್ಡಿಕೆಗೆ ಮಾತ್ರ ಮಾರುತ್ತೇನೆ: ‘ನನಗೆ ಕಿಕ್​ಬ್ಯಾಕ್ ರೂಪದಲ್ಲಿ ದುಬಾರಿ ಕೈಗಡಿಯಾರ ನೀಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸುತ್ತಿದ್ದಾರೆ. ನನ್ನ ಸ್ನೇಹಿತರೊಬ್ಬರು ವಾಚ್ ಉಡುಗೊರೆ ನೀಡಿದ್ದು ನಿಜ, ಅದಕ್ಕಾಗಿಯೇ ಅವರಿಗೆ ಐದು ಲಕ್ಷ ರೂ.ಗೆ ಖರೀದಿಸುವಂತೆ ಹೇಳಿದ್ದೇನೆ. ಬೇರೆಯವರಿಗೆ ಅದನ್ನು ಮಾರುವುದಿಲ್ಲ. ಕುಮಾರಸ್ವಾಮಿ ಖರೀದಿದರೆ ಮಾತ್ರ ಮಾರುತ್ತೇನೆ. ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬಿಟ್ಟು ಕುಮಾರಸ್ವಾಮಿ ಜನರ ಸಮಸ್ಯೆಗಳ ಬಗ್ಗೆ ಸ್ವಲ್ಪ ಗಮನ ಹರಿಸಲಿ’ ಎಂದರು.

***

ಗಿಫ್ಟ್ ಕೊಟ್ಟೋರ್ಯಾರು ಹೇಳಿ?

ದುಬಾರಿ ಬೆಲೆಯ ವಾಚನ್ನು ಕೊಟ್ಟವರ್ಯಾರು ಎಂದು ಸಿಎಂ ಸಿದ್ದರಾಮಯ್ಯ ಬಹಿರಂಗಪಡಿಸ ಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿ ಸವಾಲು ಹಾಕಿದ್ದಾರೆ. ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇಷ್ಟೊಂದು ದೊಡ್ಡ ಮೊತ್ತದ ಉಡುಗೊರೆಯನ್ನು ಮುಖ್ಯಮಂತ್ರಿಗೆ ಸುಮ್ಮನೆ ನೀಡಲು ಸಾಧ್ಯವಿಲ್ಲ. ಏನಾದರೂ ದೊಡ್ಡ ಕೆಲಸ ಮಾಡಿಸಿಕೊಂಡೇ ಉಡುಗೊರೆ ನೀಡಿರಬೇಕು. ಈ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆಯೇ ಎಂಬ ಬಗ್ಗೆಯೂ ಸಿದ್ದರಾಮಯ್ಯ ರಾಜ್ಯದ ಜನತೆಗೆ ಉತ್ತರ ನೀಡಲಿ ಎಂದು ಆಗ್ರಹಿಸಿದರು.ಮಗನ ಸಿನಿಮಾಗಾಗಿ ಬ್ಯಾಂಕ್​ನಿಂದ ಸಾಲ ಮಾಡಿದ್ದೇನೆ. ನನ್ನ ಪುತ್ರ ನಿಖಿಲ್ ಒಂದು ಕಂಪನಿಯ ನಿರ್ದೇಶಕನಾಗಿದ್ದು, ಅಲ್ಲಿ ಸಂಪಾದನೆ ಮಾಡಿದ ಹಣದಿಂದ ಅವನು ಏನಾದರೂ ಖರೀದಿ ಮಾಡುತ್ತಾನೆ. ಅವನು ಕೋಟ್ಯಂತರ ರೂ. ಮೊತ್ತದ ಕಾರನ್ನು ಖರೀದಿ ಮಾಡಿದರೆ, ತೆರಿಗೆ ಕಟ್ಟಿದ್ದಾನೆಯೇ ಅಥವಾ ಇಲ್ಲವೆ ಎನ್ನುವುದನ್ನು ಆದಾಯ ತೆರಿಗೆ ಇಲಾಖೆ ಪ್ರಶ್ನೆ ಮಾಡುತ್ತದೆ. ಸಿಎಂಗೆ ಈ ಬಗ್ಗೆ ಪ್ರಶ್ನಿಸುವ ನೈತಿಕ ಹಕ್ಕಿಲ್ಲ ಎಂದು ತಿರುಗೇಟು ನೀಡಿದರು.

ಲೋಕಾ ಮೆಟ್ಟಿಲೇರಿದ ವಾಚ್ ವಿವಾದ

ಬೆಂಗಳೂರು: ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಡುವಿನ ‘ಹ್ಯೂಬ್ಲೊಟ್ ಡೈಮಂಡ್ ವಾಚ್’ ವಿವಾದ ಇದೀಗ ಲೋಕಾಯುಕ್ತ ಅಂಗಳ ತಲುಪಿದೆ.

ಸಿಎಂ ಧರಿಸಿರುವ ಸುಮಾರು 80 ಲಕ್ಷ ರೂ. ಮೌಲ್ಯದ ವಾಚ್​ನ ಮೂಲದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಮಾನವ ಹಕ್ಕು ರಕ್ಷಣೆ, ಭ್ರಷ್ಟಾಚಾರ ನಿಮೂಲನಾ ಸಂಸ್ಥೆ ಕಾರ್ಯಕರ್ತ ರಾಮಮೂರ್ತಿಗೌಡ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದಾರೆ. ಅರ್ಕಾವತಿ ಡಿನೋಟಿಫೈ, ಗಣಿ ಗುತ್ತಿಗೆ ಅಕ್ರಮ ಪರವಾನಗಿ ವಿತರಣೆ ಆರೋಪಕ್ಕೆ ಸಂಬಂಧಪಟ್ಟಂತೆ ಸಿಎಂ ವಿರುದ್ಧ ಲೋಕಾಯುಕ್ತದಲ್ಲಿ ಈಗಾಗಲೇ ಮೂರು ದೂರು ದಾಖಲಿಸಿರುವ ರಾಮಮೂರ್ತಿಗೌಡ, ಇದೀಗ ಮಾಧ್ಯಮ ವರದಿಗಳನ್ನಾಧರಿಸಿ ವಾಚ್ ಬಗ್ಗೆ ಲೋಕಾಯುಕ್ತ ಪೊಲೀಸ್ ಘಟಕಕ್ಕೆ ಬುಧವಾರ ದೂರು ಸಲ್ಲಿಸಿದ್ದಾರೆ.

ದೂರಿನಲ್ಲೇನಿದೆ?

ಸಿಎಂ ಸಿದ್ದರಾಮಯ್ಯ 80 ಲಕ್ಷ ರೂ. ಮೌಲ್ಯದ ವಜ್ರ ಖಚಿತ ಹ್ಯೂಬ್ಲೊಟ್ ವಾಚ್ ಧರಿಸಿದ್ದಾರೆ. ಸಿಎಂ ಈ ವಾಚ್ ಖರೀದಿ ಮಾಡಿದ ಬಗ್ಗೆ ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರಗಳಲ್ಲಿ ಘೊಷಣೆ ಮಾಡಿಲ್ಲ. ಆಸ್ತಿ ವಿವರ ಗಮನಿಸಿದರೆ ಅವರು ಸಾಲಗಾರರಾಗಿದ್ದಾರೆ. ಇಷ್ಟಾಗಿಯೂ ಅವರು 80 ಲಕ್ಷ ರೂ. ಮೌಲ್ಯದ ವಾಚ್ ಖರೀದಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೆಲ ಕಂಪನಿಗಳಿಗೆ ಸರ್ಕಾರಿ ಭೂಮಿ ನೀಡಿದ್ದಕ್ಕೆ ಪ್ರತಿಯಾಗಿ ಉಡುಗೊರೆ ರೂಪದಲ್ಲಿ ಬಂದಿರುವ ಸಾಧ್ಯತೆಯಿದೆ. ಸಿಎಂ ಪರೋಕ್ಷ ಭ್ರಷ್ಟಾಚಾರ ಮಾಡಿದ್ದು, ವಾಚ್ ಬಗ್ಗೆ ತನಿಖೆ ನಡೆಸಬೇಕು ಎಂದು ದೂರುದಾರರು ಕೋರಿದ್ದಾರೆ.
http://vijayavani.net/?p=1731424

posted from Bloggeroid

No comments:

Post a Comment