Sunday, February 14, 2016

ಅಜ್ಞಾನವೇ ದುಃಖಕ್ಕೆ ಮೂಲ

ಅಜ್ಞಾನವೇ ದುಃಖಕ್ಕೆ ಮೂಲ

http://vijayavani.net/?p=1732723

ನಮಗೆ ಜೀವನದಲ್ಲಿ ಬರುವ ಕಷ್ಟಗಳಿಗೆ ಬಾಹ್ಯಸನ್ನಿವೇಶಗಳು ಕಾರಣವಲ್ಲ ಎನ್ನುವ ಮಾತನ್ನು ಗೀತೆಯ ಒಂದು ಪ್ರಮುಖ ಶ್ಲೋಕ ಹೇಳುತ್ತದೆ. ನಮ್ಮಲ್ಲಿ ಬಹುತೇಕ ಮಂದಿ ಬದುಕಿನ ಕಷ್ಟಗಳಿಗೆ ಸಂದರ್ಭವೇ ಕಾರಣವೆಂದು ಯೋಚಿಸುತ್ತಾರೆ. ‘ಸ್ವಾಮೀಜಿ, ಈ ಸನ್ನಿವೇಶವೇ ನನ್ನ ಕಷ್ಟಕ್ಕೆ ಕಾರಣ’ ಎನ್ನುತ್ತಾರೆ. ಹಾಗೆ ಹೇಳುವ ಮೂಲಕ ಪ್ರತಿಯೊಬ್ಬರೂ ತಮ್ಮನ್ನು ಸಮರ್ಥಿಸಿಕೊಳ್ಳುತ್ತಾರೆ. ‘ನಾನು ಬಡವ. ಆದ್ದರಿಂದ ದುಃಖಿಯಾಗಿದ್ದೇನೆ. ಅಥವಾ ನಾನು ಶ್ರೀಮಂತನಾದ್ದರಿಂದಲೇ ದುಃಖಿಯಾಗಿದ್ದೇನೆ. ಏಕೆಂದರೆ ಆದಾಯ ತೆರಿಗೆಯವರು ದಾಳಿ ಮಾಡಬಹುದು, ಭಯೋತ್ಪಾದಕರು ಕಿಡ್ನಾಪ್ ಮಾಡಬಹುದು ಎಂದು ಚಿಂತಿಸುತ್ತಿದ್ದೇನೆ’.

ಹೀಗೆ ಎಲ್ಲರೂ ಸನ್ನಿವೇಶವನ್ನು ಸಮರ್ಥಿಸುತ್ತಾ ಹೋಗುತ್ತಾರೆ. ಆದರೆ ನಿಜವಾಗಿ ನೋಡಿದರೆ ಸನ್ನಿವೇಶವು ಸಂಕಷ್ಟಕ್ಕೆ ಕಾರಣವಲ್ಲ. ಸನ್ನಿವೇಶ ಅಥವಾ ಸಂದರ್ಭಕ್ಕಿಂತಲೂ, ಆಂತರಿಕ ಸ್ಥಿತಿಯೇ ಸುಖದುಃಖಗಳಿಗೆ ಕಾರಣ ಎಂದು ಗೀತೆ ಬೋಧಿಸುತ್ತದೆ. ಶ್ರೀಕೃಷ್ಣ ಹೇಳುತ್ತಾನೆ: ‘ನಿಮ್ಮ ಬುದ್ಧಿಯು ಅಜ್ಞಾನದಿಂದ ಆವೃತವಾಗಿದೆ (ಅಜ್ಞಾನೇನ ಆವೃತಂ ಜ್ಞಾನಂ). ಹೀಗೆ ಅಜ್ಞಾನದಿಂದ ಆವೃತವಾಗಿರುವುದರಿಂದ ಮೂಲತಃ ಅಜ್ಞಾನದಿಂದಲೇ ನರಳುತ್ತಿರುವಿರಿ. ನೀವಿರುವ ಸನ್ನಿವೇಶದಿಂದ ಒಂದು ಘಟಕದಷ್ಟು ಪರಿಣಾಮವಾದರೆ, ಅಜ್ಞಾನದ ಕಾರಣದಿಂದ ಅದನ್ನೆದುರಿಸಲಾಗದ ನಿಮ್ಮ ದೌರ್ಬಲ್ಯವೇ ಅದಕ್ಕಿಂತ ಗಾಢವಾದ ಪರಿಣಾಮವನ್ನುಂಟು ಮಾಡುತ್ತದೆ’.

ಆದ್ದರಿಂದ ಒಬ್ಬ ವ್ಯಕ್ತಿಯ ಉತ್ಕೃಷ್ಟತೆಯನ್ನು ಹೆಚ್ಚಿಸಬೇಕಾದರೆ ಅವನ ಅರಿವನ್ನು ಹೆಚ್ಚಿಸಬೇಕಾಗುತ್ತದೆ. ಜೀವನದಲ್ಲಿ ಹೆಚ್ಚು ಪರಿಣಾಮಕಾರಿಯಾಗಬೇಕಾದರೆ, ಸನ್ನಿವೇಶಗಳೇ ಜೀವನ ಹಿಂಡುತ್ತಿವೆಯೋ ಅಥವಾ ಅವುಗಳನ್ನು ಎದುರಿಸಲು ಸಾಮರ್ಥ್ಯ ಅಥವಾ ಅಸಾಮರ್ಥ್ಯಗಳು ಗೊಂದಲವನ್ನು ಸೃಷ್ಟಿಸುತ್ತಿವೆಯೋ ಎಂಬುದನ್ನು ಅರಿತುಕೊಳ್ಳಬೇಕು. ಈ ವಿಶಿಷ್ಟ ವಿವೇಕವನ್ನು ನಾವು ಜೀವನದಲ್ಲಿ ಬೆಳೆಸಿಕೊಳ್ಳದಿದ್ದರೆ ಸನ್ನಿವೇಶಗಳನ್ನೇ ದೂರುತ್ತಾ ಇರುತ್ತೇವೆ. ಒಂದು ಉದಾಹರಣೆಯ ಮೂಲಕ ಇದನ್ನು ಸ್ಪಷ್ಟಪಡಿಸುತ್ತೇನೆ. ಒಬ್ಬ ಮುದುಕ ಹಾಗೂ ತರುಣ ಬಾರಿನಲ್ಲಿ ಕುಳಿತಿದ್ದಾರೆ. ಅಷ್ಟರಲ್ಲಿ ಮತ್ತೊಬ್ಬ ತರುಣ ಬಂದು ಅವರ ಹತ್ತಿರದ ಕುರ್ಚಿಯಲ್ಲಿ ಕುಳಿತುಕೊಂಡು ಇವರ ಸಂಭಾಷಣೆ ಕೇಳುತ್ತಾನೆ.

ಮುದುಕ ಕೇಳುತ್ತಾನೆ: ‘ನೀನು ವಾಸಿಸುವುದೆಲ್ಲಿ?’

ಯುವಕ: ‘ಬಿ2, ಆನಂದ್ ಅಪಾರ್ಟ್ ಮೆಂಟ್ಸ್, ರಾಜ್​ವುಹಲ್ ವಿಲಾಸ್ ಎಕ್ಸ್​ಟೆನ್ಷನ್​ನಲ್ಲಿ.’

ಮುದುಕ: ‘ಅರೆ, ನಾನೂ ಅಲ್ಲಿಯೇ ಇರುತ್ತೇನೆ. ನಾವು ಅದೇಕೆ ಈವರೆಗೂ ಭೇಟಿಯಾಗಿಲ್ಲ? ಅಂದಹಾಗೆ, ನೀನು ಎಷ್ಟು ವರ್ಷದಿಂದ ಅಲ್ಲಿದ್ದೀಯ?’

ಯುವಕ: ಕಳೆದ 25 ವರ್ಷಗಳಿಂದ.’

ಮುದುಕ: ‘ಓ ದೇವರೇ, 25 ವರ್ಷಗಳಿಂದ ಅಲ್ಲಿದ್ದರೂ ನಾವೇಕೆ ಭೇಟಿಯಾಗಲಿಲ್ಲ?’

ಈ ಸಂಭಾಷಣೆಯನ್ನು ಕದ್ದು ಕೇಳುತ್ತಿದ್ದ ಯುವಕನಿಗೆ ಆಶ್ಚರ್ಯ, ಗೊಂದಲ. ಆತನಿನ್ನೂ ಕುಡಿಯಲು ಆರಂಭಿಸಿಲ್ಲ. ಆದರೆ ಒಂದೇ ಅಪಾರ್ಟ್​ವೆುಂಟಿನಲ್ಲಿ ಒಂದೇ ಅಂತಸ್ತಿನಲ್ಲಿ 25ವರ್ಷಗಳಿಂದಿದ್ದರೂ ಭೇಟಿಯಾಗಲಿಲ್ಲವೆಂದು ಮಾತಾಡುತ್ತಿರುವುದನ್ನು ಕೇಳುತ್ತಿದ್ದಾನೆ.

ಆ ಹೊತ್ತಿಗೆ ಬಾರ್​ನ ಅಟೆಂಡರ್ ಅವನ ಪಕ್ಕಕ್ಕೆ ಬಂದು ಹೇಳಿದ ‘ಸಾರ್, ಕನಫ್ಯೂಸ್ ಆಗಬೇಡಿ. ಈ ಮುದುಕ ಮತ್ತು ಯುವಕ ಪ್ರತಿಸಂಜೆ ಇಲ್ಲಿಗೆ ಬಂದು ಇದೇ ಮಾತುಗಳನ್ನಾಡುತ್ತಿರುತ್ತಾರೆ. ಎಲ್ಲಿರುತ್ತೀರಿ? ಎಷ್ಟು ವರ್ಷಗಳಿಂದ? ಯಾವ ಫ್ಲ್ಯಾಟ್ ಇತ್ಯಾದಿ. ಅವರು ಬೇರೆ ಯಾರೂ ಅಲ್ಲ. ತಂದೆ ಮತ್ತು ಮಗ.’

ಕುಡಿದು ಮತ್ತೇರಿದ ಸ್ಥಿತಿಯಲ್ಲಿ ತಂದೆ-ಮಕ್ಕಳ ಗಾಢ ಸಂಬಂಧವೂ ಅವರಿಬ್ಬರಿಗೆ ಕಾಣಿಸುವುದಿಲ್ಲ. ಗೀತೆಯಲ್ಲಿ ಭಗವಂತ ಹೇಳುತ್ತಾನೆ: ನಾವು ಮತ್ತರಾಗಿರುವುದರಿಂದಲೇ ದುಃಖಿಗಳಾಗಿದ್ದೇವೆ. ನಾವೇನು ಕುಡಿದಿದ್ದೇವೆ? ಅಜ್ಞಾನವೆಂಬ ಮದ್ಯವನ್ನು ಕುಡಿದು ಮತ್ತರಾಗಿದ್ದೇವೆ. ಆದ್ದರಿಂದ ನಮ್ಮ ಮುಂದೆಯೇ ಇರುವ ಆನಂದವನ್ನು ಕಾಣಲಾರದೆ ನಮ್ಮ ಇಂದ್ರಿಯಗಳಲ್ಲಿ ಹುಡುಕುತ್ತಿದ್ದೇವೆ. ಆದ್ದರಿಂದ ನಮ್ಮಲ್ಲುಂಟಾಗಿರುವ ದುಃಖಕ್ಕೆ ಸನ್ನಿವೇಶ ಕಾರಣವಲ್ಲ. ನಮ್ಮ ಮನಸ್ಸು ಸನ್ನಿವೇಶಗಳೊಂದಿಗೆ ತೊಡಗಿಕೊಳ್ಳುವ ರೀತಿಯಿಂದ ದುಃಖವುಂಟಾಗುತ್ತದೆ. ಆದ್ದರಿಂದ ಸನ್ನಿವೇಶದಲ್ಲಿ ದುಃಖವಿಲ್ಲ. ನಾವಿರುವ ಅಸ್ತಿತ್ವದ ಸ್ಥಿತಿಯಲ್ಲಿ ದುಃಖವಿದೆ. ಆದ್ದರಿಂದ ವೈಯಕ್ತಿಕ ಪರಿಣಾಮಕಾರಿತ್ವಕ್ಕಾಗಿ ನೀವು ನಿಮಗೆ ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ನಿಮ್ಮನ್ನು ಸನ್ನಿವೇಶ ವಿಚಲಿತಗೊಳಿಸುತ್ತಿದೆಯೇ? ಅಥವಾ ಸನ್ನಿವೇಶವನ್ನು ನೀವು ನೋಡುವ ದೃಷ್ಟಿ ನಿಮ್ಮನ್ನು ವಿಚಲಿತಗೊಳಿಸುತ್ತಿದೆಯೇ? ನೀವು ಸನ್ನಿವೇಶವನ್ನು ಅಜ್ಞಾನದಿಂದ ನೋಡುತ್ತಿರುವಿರಾದರೆ, ನಿಮ್ಮನ್ನು ವಿಚಲಿತಗೊಳಿಸುತ್ತಿರುವುದು ಅಜ್ಞಾನವೇ ಸರಿ.

posted from Bloggeroid

No comments:

Post a Comment