
ಹರಿಹರಪುರ ಶ್ರೀಧರ್
ಟ್ಯಾಕ್ಸಿ ಚಾಲನೆ ಮಾಡುತ್ತಿರುವ ಈತ ನಾಗರಾಜ್. ವಯಸ್ಸು 25. ಟ್ಯಾಕ್ಸಿಯಲ್ಲಿ ಕುಳಿತ ಕೂಡಲೇ ಸಾಮಾನ್ಯವಾಗಿ ಚಾಲಕರ ಪರಿಚಯ ಮಾಡಿಕೊಳ್ಳುವ ಸ್ವಭಾವ ನನ್ನದು. ನೋಡುವಾಗಲೇ ಕೆಲವರನ್ನು ಮಾತನಾಡಿಸಲೇ ಬೇಕೆನಿಸುತ್ತದೆ.ಅಂತಾ ವ್ಯಕ್ತಿಗಳಲ್ಲಿ ಈತನೂ ಒಬ್ಬ. ಮಾತಿಮ ಮಧ್ಯೆ ಆತನ ತುಟಿಯಿಂದ ಬಂದ ಒಂದು ಮಾತು ಆತನಲ್ಲಿ ನನ್ನ ಒಲವನ್ನು ಹೆಚ್ಚಿಸಿತು.
ಆತನಿಗೆ ವಯಸ್ಸು 20 ಆಗಿದ್ದಾಗ ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ 11KV ವಿದ್ಯುತ್ ತಂತಿಯನ್ನು ಅಕಸ್ಮಾತ್ ತುಳಿದು ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾನೆ. ಇವನಿಗೆ ಎಚ್ಚರವಾದಾಗ ಆಸ್ಪತ್ರೆಯಲ್ಲಿ ಮಲಗಿದ್ದ. ತಮ್ಮ ಸರ್ವಸ್ವವನ್ನೂ ಅಡವಿಟ್ಟು ಈತನ ಜೀವ ಉಳಿಸಿದರು.
ನಾಲ್ಕು ದಿನ ಕಳೆದಂತೆ ಸಾಲಿಗರು ಮನೆಯ ಹತ್ತಿರ ಬಂದು ಇವರ ಜೀವನಕ್ಕೆ ಆಧಾರವಾಗಿದ್ದ ಹಸುವನ್ನು ಹೊಡೆದುಕೊಂಡು ಹೋದರು! ಇನ್ನು ಹೊಟ್ಟೆ ಪಾಡಿಗೆ ಬೇರೆ ದಾರಿಯೇ ಇಲ್ಲ. ಆಗ ಅಪ್ಪನ ಬಾಯಲ್ಲಿ ಬಂದ ಒಂದು ಮಾತು ಈತನ ಜೀವನದ ದಿಕ್ಕು ಬದಲಿಸಿತು!
" ಅವತ್ತು ಸತ್ತಿದ್ದರೆ ಭೂಮಿಯಲ್ಲಿ ಹೂತುಹಾಕಿ ಒಂದು ಹಿಡಿ ಮಣ್ಣನ್ನು ಹಾಕಿ ಬರುತ್ತಿದ್ದೆ. ಇವನು ಉಳಿದು ಮನೆ ನರಕಾವಾಗಿ ಹೋಯ್ತಲ್ಲ!! "
ಆಗ ಈತ ನಿರ್ಧರಿಸಿದನಂತೆ " ಇನ್ನು ಅಪ್ಪ-ಅಮ್ಮನಿಗೆ ಬಾರವಾಗಬಾರದು, ಏನಾದರೂ ಮಾಡಿ ನನ್ನ ಕಾಲಿನ ಮೇಲೆ ನಾನು ನಿಲ್ಲುವುದಷ್ಟೇ ಅಲ್ಲ, ಅವರನ್ನು ನನ್ನ ದುಡಿಮೆಯಿಂದ ಸಾಕಬೇಕು "
ಮನೆ ಬಿಟ್ಟು ಹೊರಟ. ರಸ್ತೆಯಲ್ಲಿ ಮನೆ ಮುಂದು ನಿಂತಿರುತ್ತಿದ್ದ ಕಾರುಗಳನ್ನು ತೊಳೆದುಕೊಡುತ್ತೇನೆಂದು ಯಜಮಾನರಲ್ಲಿ ಕೆಲಸ ಯಾಚಿಸಿದ. ಶ್ರದ್ಧೆಯಿಂದ ಕಾರ್ ತೊಳೆಯಲು ಶುರುಮಾಡಿದ. ನಾಲ್ಕು ಕಾಸು ಬಂದಿದ್ದನ್ನು ಅಪ್ಪ-ಅಮ್ಮನಿಗೆ ಕೊಟ್ಟ . ದಿನ ದಿನಕ್ಕೆ ತೊಳೆಯುವ ಕಾರ್ ಗಳ ಸಂಖ್ಯೆ ಹೆಚ್ಚಿತು. ದುಡಿಯುವ ಮಾರ್ಗ ಕಂಡುಕೊಂಡ. ನಿಧಾನವಾಗಿ ಕಾರ್ ಡ್ರೈವಿಂಗ್ ಕಲಿತ. ನಾಲ್ಕಾರು ದಿನ ಯಜಮಾನರ ಕಾರ್ ಓಡಿಸಿದ. ಕೊನೆಗೆ ಸಾಲಮಾಡಿ ಕಾರ್ ಖರೀಧಿಸಿದ. ಈಗ ಕಳೆದ ಮೂರ್ನಾಲ್ಕು ವರ್ಷಗಳಿಂದ ತನ್ನ ಸ್ವಂತ ಕಾರ್ ಚಾಲಕನಾಗಿ ದುಡಿದು ಅಪ್ಪ-ಅಮ್ಮನನ್ನು ಸಾಕುತ್ತಿದ್ದಾನೆ.
25 ನೇ ವಯಸ್ಸಿನಲ್ಲಿ ಇವನಿಗಾದ ಅನುಭವದಿಂದ ನಾನು ಕಾರ್ ಹತ್ತಿದ ಒಂದೆರಡು ನಿಮಿಷದಲ್ಲೇ ಅವನ ತುಟಿಗಳಿಂದ ಬಂದ ಮಾತುಗಳಿಂದ ನಾನು ಬೆರಗಾಗಿದ್ದೆ " ಯಾರ ಜೀವನ ಶಾಶ್ವತ ಸಾರ್! ನಾಲ್ಕು ದಿನದ ಬದುಕಿಗಾಗಿ ಹೋರಾಟ ಮಾಡ್ತಾ ಇದೀವಿ!!
ಜೀವನ ಎಂತಾ ಪಾಠ ಕಲಿಸುತ್ತೆ ಅಲ್ವಾ?
ನನಗೆ ಈತ ಯಾಕೆಇಷ್ಟವಾದ ಗೊತ್ತಾ?
PUC ನಂತರ ನಾನು ಮಾಡಿದ್ದೂ ಹೀಗೆಯೇ! ಆಗ ಹೇಮಾವತಿ ಪ್ರಾಜೆಕ್ಟ್ ಕೆಲಸ ನಡೆಯುತ್ತಿತ್ತು. ಮನೆಯ ಬಡತನ ಸಹಿಸಲಾರದೆ ತಾತ್ಕಾಲಿಕ ಆಧಾರದಲ್ಲಿ PWD ಇಲಾಖೆಯಲ್ಲಿ " ಲಿಟರೇಟ್ ಕೂಲಿ " ಎನ್ನುವ ಕೆಲಸಕ್ಕೆ ಸೇರಿಕೊಂಡೆ. ಮೊದಲ ತಿಂಗಳ ಸಂಬಳದಲ್ಲಿ 120 ರೂಪಾಯಿ ಕೊಟ್ಟು ಒಂದು ಕ್ವಿಂಟಾಲ್ ಕೆಂಪಕ್ಕಿಯನ್ನು ಮನೆಗೆ ತಂದು ಇಟ್ಟೆ. ಅವತ್ತು ನನಗಾದ ಸಂತೋಷ ಅಷ್ಟಿಷ್ಟಲ್ಲ. " ಇನ್ನು ಅಪ್ಪ-ಅಮ್ಮ ಹಸಿವಿನಿಂದ ಇರಬೇಕಾಗಿಲ್ಲ!! " ಎಂತಾ ಮುಗ್ಧತೆ ನೋಡಿ. ಕೇವಲ ಅಕ್ಕಿ ತಂದರೆ ಎಲ್ಲರ ಹೊಟ್ಟೆ ತುಂಬಿ ಬಿಡುತ್ತದೆಂಬ ಕಲ್ಪನೆ!! ಅದಕ್ಕೆ ಉಳಿದ ಪರಿಕರ ಬೇಡವಾ?
ಪಾಪ ನಮ್ಮಮ್ಮ ಅದು ಹೇಗೆ ಮಾಡುತ್ತಿದ್ದರೋ?
ಹೀಗೆ ಎರಡು ವರ್ಷ ದುಡಿದ ನಂತರ ಓದು ಮುಂದುವರೆಸಿದ ಕಥೆ ಬೇರೆ ಬಿಡಿ. ಕಷ್ಟ ಅನುಭವಿಸಿದವರಿಗೆ ಮಾತ್ರವೇ ಇನ್ನೊಬ್ಬರ ಕಷ್ಟದ ಅರಿವಾಗಿ ಕಣ್ಣು ಒದ್ದೆಯಾಗುತ್ತೆ!!
ಇಂತಾ ಘಟನೆ ಇಂದಿನ ಯುವಕರ ಕಣ್ ತೆರಸಬೇಕಲ್ವಾ?
ನಾಗರಾಜ ನನಗೆ ಅತ್ಯಂತ ಪ್ರೀತಿಪಾತ್ರನಾದ. ಅವನ ಫೋನ್ ನಂಬರ್ ಪಡೆದು ಕಾರಿಂದ ಇಳಿದೆ.
posted from Bloggeroid
No comments:
Post a Comment